ಕಲಬುರಗಿ: ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ವಿಶಿಷ್ಟವಾದ ಮತ್ತು ರಾಜ್ಯದಲ್ಲಿ ಪ್ರಪ್ರಥಮ ಬಾರಿ ಆಯೋಜಿಸಿದ ಸಮ್ಮೇಳನವಾಗಿದೆ. ಒಟ್ಟು 90 ಕ್ಕೂ ಹೆಚ್ಚು ರಾಜ್ಯ ಮತ್ತು ಹೊರ ರಾಜ್ಯದ ವಿದ್ವಾಂಸರು ಪ್ರಬಂಧ ಮಂಡಿಸುತ್ತಿರುವುದು ಸಮ್ಮೇಳನದ ಹಿರಿಮೆಯನ್ನು ಹೆಚ್ಚಿಸಿದೆ ಎಂದು ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅದ್ಯಯನ ಸಂಸ್ಥೆ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧಿ ಸಭಾಂಗಣದ ಸಾಮ್ರಾಟ್ ಅಶೋಕ ವೇದಿಕೆಯಲ್ಲಿ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇದುವರೆಗೆ ನಡೆದ ಬೌದ್ಧ ಸಮ್ಮೇಳನಗಳನ್ನು ಅವಲೋಕಿಸಿದಾಗ ಬುದ್ಧನ ಸಂದೇಶಗಳ ಮೇಲೆ ಮತ್ತು ತ್ರಿಪಿಟಕಗಳ ಮೇಲೆ ಹೆಚ್ಚು ಚರ್ಚೆಯಾಗಿರುವುದು ಕಂಡು ಬರುತ್ತದೆ. ಆದರೆ ಈ ಸಮ್ಮೇಳನದಲ್ಲಿ ವಿಭಿನ್ನವಾದ ಹಲವಾರು ವಿಷಯಗಳ ಮೇಲೆ ಮತ್ತು ವಾಸ್ತವಿಕ ವಿಷಯಗಳ ಮೇಲೆ ಚರ್ಚೆಯಾಗುತ್ತಿರುವುದು ಸಂತೋಷದ ವಿಷಯ. ಇಂತಹ ಸಮ್ಮೇಳನವನ್ನು ಉದ್ಘಾಟಿಸಿದ ನನಗೆ ಸಂತೋಷ ಮತ್ತು ಹೆಮ್ಮೆಯಾಗಿದೆ ಎಂದರು.
ಆರು ಬೌದ್ಧ ಸಂಪುಟಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಡಿ.ಜಿ. ಸಾಗರ ಮಾತನಾಡುತ್ತ ಇಂತಹ ಸಮ್ಮೇಳನಗಳು ಇವತ್ತಿನ ದಿನಗಳಲ್ಲಿ ತುಂಬ ಅವಶ್ಯಕವಾಗಿದೆ. ಈ ಮೂಲಕ ಬುದ್ಧನ ಸತ್ಯ ಸಂದೇಶಗಳನ್ನು ಜನರಿಗೆ ತಲಪುವಂತಾಗುತ್ತದೆ. ಅದಕ್ಕಾಗಿ ನಾನು ವಿಶ್ವವಿದ್ಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಷಿ ಮಾತನಾಡುತ್ತ ಸಮ್ಮೇಳನವು ವಿಶ್ವವಿದ್ಯಾಲಯಕ್ಕೆ ಮತ್ತು ಕಲಬುರಗಿಯ ಜನರಿಗೆ ಜ್ಞಾನದ ಧಾಹವನ್ನು ತೀರಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪ್ರಭಾರ ಕುಲಪತಿಗಳಾದ ಪ್ರೊ. ದೇವಿದಾಸ ಜಿ. ಮಾಲೆ ಮಾತನಾಡಿ, ರಾಷ್ಟ್ರೀ ಬೌದ್ಧ ಸಾಹಿತ್ಯ ಸಮ್ಮೇಳನ ವಿಶ್ವವಿದ್ಯಾಲಯಕ್ಕೆ ಹಿರಿಮಿಯನ್ನು ತಂದುಕೊಟ್ಟಿದೆ. ಇಷ್ಟೆಲ್ಲಾ ವಿದ್ವಾಂಸರು ಆಗಮಿಸಿರುವುದು ಸಂತೋಷದ ವಿಚಾರ ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು.
ಈ ವೇಳೆಯಲ್ಲಿ ಪ್ರೊ. ಎಚ್.ಟಿ. ಪೋತೆ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಕನ್ನಡ ಅಧ್ಯಾಯನ ಕೇಂದ್ರದ ಅಧ್ಯಾಪಕರು ಸೇರಿದಂತೆ ಮುಂತಾದವರು ಇದ್ದರು.
ಆಮ್ರಪಾಲಿ ವೇದಿಕೆ ಯಲ್ಲಿ ಗೋಷ್ಠಿ1 ರಲ್ಲಿ ಬುದ್ಧ ಮತ್ತು ಕನ್ನಡ ಸಾಹಿತ್ಯ ಕುರಿತು ವಿದ್ವಾಂಸರು ವಿಚಾರ ಮಂಡಿಸಿದರು. ಬುದ್ಧ ಮತ್ತು ತತ್ವ ಪದಕಾರರು ಕುರಿತು ಡಾ ಮೀನಾಕ್ಷಿ ಬಾಳಿ ಮಾತನಾಡಿ ಬುದ್ಧ ಮತ್ತು ತತ್ವಪದಕಾರರಲ್ಲಿ ದೇವರು ಭ್ರಮೆ ನಿರಾಕರಣೆ. ಅರಿವು, ಗುರು ತತ್ವ , ಒಂದೇ ಆಗಿತ್ತು ಎಂದರು.
ಡಾ ಶಿವಾನಂದ ಕೆಳಗಿನ ಮನಿ ಬಾ.ನಿಂಗಪ್ಪ ಮುದೇನೂರು ವಿಚಾರ ಮಂಡಿಸಿದರು ಹಂಪಿ ಕನ್ನಡ ವಿ.ವಿಯ ಚಿನ್ನಸ್ವಾಮಿ ಸೋಸಲೆ ಅಧ್ಯಕ್ಷತೆ ವಹಿಸಿದ್ದರು.