ಆಳಂದ: ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಧಾರ್ಮಿಕ ನಂಬಿಕೆಯು ಅತೀ ಪ್ರಮುಖವಾದ ಸ್ಥಾನವನ್ನು ನಿರ್ವಹಿಸಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಶುಕ್ರವಾರ ಆಳಂದ ತಾಲೂಕಿನ ತಡಕಲ್ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮಲ್ಲಿಕಾರ್ಜುನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಕೀಯ ಎನ್ನುವುದು ಸಮಾಜಸೇವೆಯ ಒಂದು ಪ್ರಬಲ ಕ್ಷೇತ್ರ ಅದರ ಮೂಲಕ ಸಮಾಜದ ವಿವಿಧ ಸ್ತರಗಳ ಜನತೆಯ ಸೇವೆ ಮಾಡಬಹುದು ಅದಕ್ಕಾಗಿ ಜನರ ಸಹಕಾರ ಅವಶ್ಯಕವಿದೆ ಅದನ್ನು ತಡಕಲ ಮತ್ತು ತಾಲೂಕಿನ ಜನರಿಂದ ಪಡೆದಿದ್ದೇನೆ ಅವರ ಋಣ ತೀರಿಸುವುದಕ್ಕಾಗಿ ಬದುಕಿರುವವರೆಗೆ ಶ್ರಮಿಸುತ್ತೆನೆ ಎಂದರು.
ಗ್ರಾಮದ ಗೆಳೆಯರ ಸಹಕಾರ ಮತ್ತು ಮಲ್ಲಿಕಾರ್ಜುನ ದೇವರ ಅನುಗ್ರಹದಿಂದ ಅಚಾನಕ್ಕಾಗಿ ರಾಜಕೀಯ ಪ್ರವೇಶ ಮಾಡಿದೆ ಮುಂದೆ ಅದು ನಾಲ್ಕು ಸಲ ವಿಧಾನಸಭೆಗೆ ಕಳುಹಿಸುವಂತಾಯಿತು. ಗೆಳೆಯರ ಮತ್ತು ದೇವರ ಸಹಕಾರವಿದ್ದರೇ ಏನಾದರೂ ಸಾಧಿಸಬಹುದು ಎಂಬುವುದಕ್ಕೆ ನಾನೇ ಸಾಕ್ಷಿ ಎಂದು ಭಾವುಕರಾದರು.
ಮಾದನ ಹಿಪ್ಪರ್ಗಿಯ ಅಭಿನವ ಶಿವಲಿಂಗೇಶ್ವರ ಸ್ವಾಮೀಜೀ ಮಾತನಾಡಿ, ಗುತ್ತೇದಾರರು ಧಾರ್ಮಿಕ ಮನೋಭಾವವುಳ್ಳವರಾಗಿದ್ದು ಸಮಭಾವದಿಂದ ನಡೆಯುವರಾಗಿದ್ದಾರೆ ಸಮಾಜದ ಎಲ್ಲ ಜಾತಿ, ಧರ್ಮಗಳನ್ನು ಜೊತೆಗೆ ತೆಗೆದುಕೊಂಡು ಹೋಗುವ ಶಕ್ತಿ ಭಕ್ತಿ ಅವರಿಗೆ ಕರುಣಿಸಿದ್ದಾನೆ ಮುಂದಿನ ಅವರ ರಾಜಕೀಯ ಜೀವನ ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.
ಚಿಣಮಗೇರಿಯ ವೀರ ಮಹಾಂತ ಶಿವಾಚಾರ್ಯರು, ಶಾಂತವೀರ ಶಿವಾಚಾರ್ಯರು ಮಾತನಾಡಿದರು. ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ ಕಮಿಟಿ ವತಿಯಿಂದ ಸಿದ್ಧಮಲ್ಲ ಶಿವಾಚಾರ್ಯರಿಗೆ, ಶಾಸಕ ಸುಭಾಷ್ ಆರ್ ಗುತ್ತೇದಾರ ದಂಪತಿಗಳಿಗೆ ತುಲಾಭಾರ ಕಾರ್ಯಕ್ರಮ ನೇರವೆರಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿ.ಪಂ ಸದಸ್ಯರಾದ ಹರ್ಷಾನಂದ ಗುತ್ತೇದಾರ, ಗುರುಶಾಂತ ಪಾಟೀಲ ನಿಂಬಾಳ, ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ, ಮುಖಂಡರಾದ ಅಶೋಕ ಗುತ್ತೇದಾರ, ಮಲ್ಲಣ್ಣ ನಾಗೂರೆ, ಹಣಮಂತರಾವ ಮಲಾಜಿ, ರಾಜಶೇಖರ ಮಲಶೆಟ್ಟಿ, ಶ್ರೀಮಂತ ನಾಮಣೆ, ಶಿವಪುತ್ರ ಬೆಳ್ಳೆ, ಗುತ್ತೇದಾರ ಪರಿವಾರದವರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಅಪ್ಪಾಸಾಬ ಗುಂಡೆ ಕಾರ್ಯಕ್ರಮ ನಿರ್ವಹಿಸಿದರು.