ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಅವರ ಕುಟುಂಬದ ಇನ್ನೋರ್ವನಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.
76 ವರ್ಷದ ವೃದ್ಧ ಮೃತಪಟ್ಟ ನಂತರ ಇವರ ಕುಟುಂಬ, ಸಂಬಂಧಿಕರನ್ನು ತಪಾಸಣೆಗೆ ಒಳಪಡಿಸಿದ್ದು, ಒಟ್ಟು ನಾಲ್ಕು ಜನರಿಗೆ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ ಇವರ ಗಂಟಲು ಹಾಗೂ ಸೋಂಕಿನ ಮಾದರಿಯನ್ನು ಬೆಂಗಳೂರು ಲ್ಯಾಬ್ ಗೆ ರವಾನೆ ಮಾಡಿತು.
ಕಲಬುರಗಿಯ 4 #COVID19 ಶಂಕಿತರಲ್ಲಿ, 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ #COVID19 ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ
— B Sriramulu (@sriramulubjp) March 15, 2020
ಈ ನಾಲ್ವರಲ್ಲಿ ಮೂವರ ವರದಿ ನೆಗೆಟಿವ್ ಬಂದಿರುವುದಾಗಿ ನಿನ್ನೆ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. ಇನ್ನೋರ್ವ ವ್ಯಕ್ತಿಯ ವರದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಅಂಶ ಇರುವುದು ಬೆಳಕಿಗೆ ಬಂದಿದೆ. ಮೃತ ವೃದ್ಧನ ಜೊತೆ ನೇರ ಸಂಪರ್ಕ ಹೊಂದಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ರೋಗಿಗೆ ಇ.ಎಸ್.ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.