ಶಹಾಬಾದ: ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ರವಿವಾರ ನಡೆಯುವ ವಾರದ ಸಂತೆಯನ್ನು ರದ್ದು ಪಡಿಸಲಾಗಿದ್ದು, ಎಲ್ಲಾ ತರಕಾರಿ ವ್ಯಾಪಾರಸ್ಥ ಸಂಘದವರು ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂದು ಪೌರಾಯುಕ್ತ ವೆಂಕಟೇಶ ಹೇಳಿದರು.
ಅವರು ಶುಕ್ರವಾರ ನಗರಸಭೆಯ ಸಭಾಂಗಣದಲ್ಲಿ ಕೊರೊನಾ ವೈರಸ್ ಹರಡದಂತೆ ತರಕಾರಿ ವ್ಯಾಪಾರಸ್ಥರ ಸಂಘದ ಜತೆ ವಾರದ ಸಂತೆ ರದ್ದುಪಡಿಸುವ ಕುರಿತು ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಇಡೀ ಜಗತ್ತಿಗೆ ಮಹಾಮಾರಿ ರೋಗವಾದ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ.ಇದರಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದೆ ಗಡಾಂತರ ಎದುರಿಸಬೇಕಾಗುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಯಾವುದೇ ಕಾರಣಕ್ಕೂ ವಾರದ ಸಂತೆ ನಡೆಸುವಂತಿಲ್ಲ. ಅಲ್ಲದೇ ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೂ ಸಂತೆ ಮಾಡುವಂತಿಲ್ಲ.
ನಗರದಲ್ಲಿ ಕರೊನಾ ಸಹಾಯವಾಣಿ ಪ್ರಾರಂಭವಾಗಿದ್ದು, ಸಾರ್ವಜನಿಕರು ಕರೋನಾ ಲಕ್ಷಣಗಳು ಕಂಡು ಬಂದರೆ ಮತ್ತು ಯಾರಾದರೂ ವಿದೇಶದಿಂದ ಬಂದವರ ಮಾಹಿತಿ ನೀಡಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಕರೊನಾ ವೈರಸ್ ಲಕ್ಷಣಗಳಾದ ತೀವ್ರ ಜ್ವರ, ನೆಗಡಿ,ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು.ಮುಂಜಾಗೃತ ಕ್ರಮವಾಗಿ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಅಡ್ಡ ಹಿಡಿಯಬೇಕು. ಮಾಸ್ಕ್ ಧರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.
ಕೈಗಳನ್ನು ಸಾಬೂನಿನಿಂದ , ಸ್ಯಾನಿಟೈಜರ್ ದ್ರವದಿಂದ ತೊಳೆದುಕೊಳ್ಳಬೇಕು.ಆದಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು.ರೋಗದ ಲಕ್ಷಣ ಹೊಂದಿರುವವರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಕೊರೊನಾ ವೈರಸ್ ಬಗ್ಗೆ ಭಯಬೇಡ; ಎಚ್ಚರವಿರಲಿ. ಒಟ್ಟಾರೆಯಾಗಿ ಸಾರ್ವಜನಿಕರು ಭಯಪಡದೇ ಕೊರೊನಾ ಹರಡದಂತೆ ಮುಂಜಾಗೃತ ವಹಿಸುವುದು ಅವಶ್ಯಕ ಎಂದರು. ನಂತರ ತರಕಾರಿ ವ್ಯಾಪಾರಸ್ಥರು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು. ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಕಿರಿಯ ನೈರ್ಮಲ್ಯ ನಿರೀಕ್ಷಕ ರಾಜೇಶ,ಶರಣು ಇತರರು ಇದ್ದರು.