ಕಲಬುರಗಿ: ವಿಶ್ವದೆಲ್ಲೆಡೆ ಹಬ್ಬಿರುವ ಮಹಾಮಾರಿ ಕೊರೋನಾ ಸೋಂಕು ನಿಗ್ರಹಕ್ಕೆ ಮತ್ತು ಸೋಂಕಿನಿಂದ ರಾಜ್ಯದ ಜನತೆಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಸರ್ಕಾರಿ ನೌಕರರ ಒಂದು ದಿನದ ವೇತನ ದೇಣಿಗೆ ರೂಪದಲ್ಲಿ ನೀಡುವುದಾಗಿ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ್ದು, ಇದಕ್ಕೆ ಕಲಬುರಗಿ ಜಿಲ್ಲಾ ಶಾಖೆಯು ಬೆಂಬಲ ಸೂಚಿಸುತ್ತದೆ ಎಂದು ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.
ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿ ರಾಜ್ಯ ಸರ್ಕಾರ, ವಿಶೇಷವಾಗಿ ಆರೋಗ್ಯ, ವೈದ್ಯಕೀಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿಗಳು ಹಗಲು-ರಾತ್ರಿ ಎನ್ನದೆ ಕೊರೋನಾ ಪೀಡಿತರಿಗೆ ಚಿಕಿತ್ಸೆ, ಅರಿವು ಮೂಡಿಸುವ ಮತ್ತು ಕೊರೋನಾ ಹರಡದಂತೆ ಮುಂಜಾಗ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ದೇಣಿಗೆಯಿಂದ ಸಂಗ್ರಹಣೆಯಾದ ಮೊತ್ತವನ್ನು ಕೊರೋನಾ ಸೋಂಕು ಪೀಡಿತರ ಚಿಕಿತ್ಸೆಗೆ, ಚಿಕಿತ್ಸೆ ಕಾರ್ಯದಲ್ಲಿ ನಿರತ ಸಿಬ್ಬಂದಿಗಳಿಗೆ ಅಗತ್ಯ ಸುರಕ್ಷಾ ಪರಿಕರ ಖರೀದಿಸಲು ಹಾಗೂ ವೈರಾಣು ಹರಡದಂತೆ ೨೪ ಗಂಟೆಗಳ ಕಾಲ ಅಗತ್ಯ ಸೇವೆಗಳಡಿ ಕಾರ್ಯನಿರ್ವಹಿಸುತ್ತಿರುವ ವಿಶೇಷವಾಗಿ ಆರೋಗ್ಯ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಹೆಚ್ಚಿನ ವೇತನ-ಗೌರವಧನ ನೀಡಲು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಿ.ಎಸ್.ಷಡಾಕ್ಷರಿ ಅವರು ಕೋರಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ ಅಂದಾಜು ೨೦೦ ಕೋಟಿ ರೂ. ಆಗಲಿದೆ ಎಂದು ರಾಜು ಲೇಂಗಟಿ ತಿಳಿಸಿದರು.
ಪೊಲೀಸರ ಮೇಲಿನ ಹಲ್ಲೆ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಖಂಡನೆ
ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನಸಂದಣಿ ನಿಯಂತ್ರಣಕ್ಕೆ ಕರ್ತವ್ಯ ಮೇಲಿದ್ದ ಬೆಂಗಳೂರಿನ ಸಂಜಯ ನಗರ ಪೊಲೀಸ್ ಸಿಬ್ಬಂದಿಗಳ ಮೇಲೆ ಬುಧವಾರ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಶಾಖೆಯು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.
ಮಹಾಮಾರಿ ಕೊರೋನಾ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದಲ್ಲದೆ ಸಿ.ಆರ್.ಪಿ.ಸಿ. ೧೪೪ರನ್ವಯ ನಿಷೇಧಾಜ್ಞೆ ಹೊರಡಿಸಿ ಅವಿರತ ಶ್ರಮ ಪಡುತ್ತಿದೆ.
ಅದರಂತೆ ಜಸನಂದಣಿ ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಗಳ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವುದನ್ನು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜದ ರಕ್ಷಕರಾದ ಪೊಲೀಸರ ಮೇಲೆ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೂಡಲೆ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶಾಂತಿ ಕಾಪಾಡಲು ಮನವಿ: ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಕೊರೋನ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ನೇತೃತ್ವದ ಜಿಲ್ಲಾಡಳಿತ ತಂಡ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ೨೪ ಗಂಟೆ ಕಾಲ ಅವಿರತ ಶ್ರಮ ಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಕಟ್ಟುನಿಟಾಗಿ ಪಾಲಿಸುವುದಲ್ಲದೆ ಜನಸಂದಣಿ ನಿಯಂತ್ರಿಸಲು ಕರ್ತವ್ಯ ಮೇಲಿರುವ ಪೊಲೀಸ್ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡಬೇಕು ಹಾಗೂ ಶಾಂತಿ ಕಾಪಾಡಬೇಕು ಎಂದು ರಾಜು ಲೇಂಗಟಿ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.