ಆಳಂದ: ಬೆಂಗಳೂರು ಮತ್ತು ಹೊರ ರಾಜ್ಯಗಳಲ್ಲಿ ವಾಸಿಸಿರುವ ಆಳಂದ ತಾಲೂಕಿನ ನಿವಾಸಿಗಳನ್ನು ಕರೆತರಲು ವ್ಯವಸ್ಥೆ ಮಾಡಬೇಕೆಂದು ಶಾಸಕ ಸುಭಾಷ ಗುತ್ತೇದಾರ್ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿಗೆ ಮಾಡಿಕೊಂಡಿದ್ದು, ವಿಷಯದ ಕುರಿತು ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ಆಶ್ವಾಸನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ್ ಅವರು ಬೆಂಗಳೂರು ಸೇರಿದಂತೆ ಹೊರರಾಜ್ಯದ ಮುಂಬೈ, ಪೂನಾ, ಗೋವಾಗಳಲ್ಲಿ ತಾಲೂಕಿನ ಸಾವಿರಾರು ಜನ ಕಾರ್ಮಿಕರು ಕೆಲಸಕ್ಕೆಂದು ಹೋಗಿದ್ದಾರೆ ಅವರನ್ನು ಕರೆತರಲು ತಾವು ಸುಸಜ್ಜಿತ ವೈದ್ಯ ತಂಡದೊಂದಿಗೆ ತೆರಳಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪುನಃ ತಾಲೂಕಿಗೆ ಕರೆತರಲು ವ್ಯವಸ್ಥೆ ಮಾಡುವುದಾಗಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ಶಾಸಕರ ಮನವಿಗೆ ಉತ್ತರಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸದ್ಯ ಕೋರೋನಾ ಭಯಾನಕವಾಗಿ ಪಸರಿಸುತ್ತಿದೆ ಈ ಪರಿಸ್ಥಿತಿಯಲ್ಲಿ ಅವರು ಇದ್ದ ಸ್ಥಳದಲ್ಲಿಯೇ ಅವರನ್ನು ಬಿಡುವುದು ಸಮಯೋಚಿತ ಮೇಲಾಗಿ ಅಲ್ಲಿಯ ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಿ ಅವರ ವ್ಯವಸ್ಥೆಯ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.
ಕೊರೋನಾ ವೈರಾಣು ಹಳ್ಳಿ ಗಾಡಿಗೆ ಪ್ರವೇಶಿಸಿದರೆ ಅದರ ಪರಿಣಾಮ ಗಂಭೀರವಾಗಿ ಎದುರಿಸಬೇಕಾಗುತ್ತದೆ ಮುಂಜಾಗ್ರತಾ ಕ್ರಮವಾಗಿ ಸದ್ಯಕ್ಕೆ ಅವರು ಅಲ್ಲಿಯೇ ಇರಲಿ ಎಂದು ಹೇಳಿದರು.
ಈ ವೇಳೆಯಲ್ಲಿ ೨೦೧೮-೧೯ ರಲ್ಲಿ ಪ್ರಗತಿಪರ ರೈತರಾಗಿ ಆಯ್ಕೆಯಾಗಿದ್ದ ಗುರುನಾಥ ಸನ್ಮುಖ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೫೦೦೦೦ ರೂ.ಗಳ ಚೆಕನ್ನು ಆಳಂದ ಶಾಸಕರಾದ ಸುಭಾಷ್ ಗುತ್ತೇದಾರ ನೇತೃತ್ವದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರಿಗೆ ನೀಡಿದರು.