ಕಲಬುರಗಿ: ರಾಜಧಾನಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ಇತ್ತೀಚೆಗೆ ಜರುಗಿದ ತಬ್ಲಿಘಿ ಮಾರ್ಕಾಜ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ 14 ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಮುಂಜಾಗ್ರತವಾಗಿ ಗೃಹ ಬಂಧನದಲ್ಲಿರಿಸಿ ತೀವ್ರ ನಿಗಾ ವಹಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದರು.
ಬುಧವಾರ ತಮ್ಮ ಕೊಠಡಿಯಲ್ಲಿ ಜಿಲ್ಲೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಬ್ಲಿಘಿ ಮಾರ್ಕಾಜ್ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲೆಯಿಂದ 26 ಜನ ಭಾಗವಹಿಸಿದ್ದಾರೆ ಎಂಬುದ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಇದರಲ್ಲಿ ಜಿಲ್ಲೆಗೆ ವಾಪಸ್ಸಾದ 14 ಜನರನ್ನು ಗೃಹ ಬಂಧನದಲ್ಲಿರಿಸಿದೆ. 6 ಜನ ಕರ್ನಾಟಕ್ಕಕ್ಕೆ ಇನ್ನೂ ಹಿಂದಿರುಗಿಲ್ಲ. 3 ಜನ ರಾಜ್ಯದ ಇತರೆ ಜಿಲ್ಲೆಯಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಶರತ್ ಬಿ. ವಿವರಿಸಿದರು.
ಕೊರೋನಾ ಸೋಂಕು ದಿನದಿಂದ ದಿನಕ್ಕೆ ರಾಷ್ಟ್ರದಾದ್ಯಂತ ಹೆಚ್ಚುತ್ತಿದೆ. ಕೊರೋನಾ ಸೋಂಕಿನಿಂದ ಈಗಾಗಲೆ ಕಲಬುರಗಿಯ ಓರ್ವ ವ್ಯಕ್ತಿ ನಿಧನ ಹೊಂದಿರುವುದು ಈ ಸಾಂಕ್ರಾಮಿಕ ರೋಗದ ಪರಿಣಾಮ ಅಂದಾಜಿಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾರ್ಥನಾ ಸಭೆಗೆ ಹೋಗಿರುವ ಜಿಲ್ಲೆಯ ಜನರು ಸ್ವಯಂಪ್ರೇರಿತರಾಗಿ ಬಂದು ಮಾಹಿತಿ ನೀಡಬೇಕು ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಚಿಕಿತ್ಸೆಗೆ ಒಳಪಡಬೇಕು. ಇದರಿಂದ ನಿಮ್ಮ, ನಿಮ್ಮ ಕುಟುಂಬ ಮತ್ತು ಸಮುದಾಯದ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ ಎಂದು ಶರತ್ ಬಿ. ಮನವಿ ಮಾಡಿದರು.
ಸಂಭ್ರಮದ ಸಮಯ ಇದಲ್ಲ: ಕಲಬುರಗಿಯಲ್ಲಿ ಕೊರೋನಾ ಪಾಸಿಟಿವ್ ಬರುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ಸಂಭ್ರಮದ ರೀತಿಯಲ್ಲಿ ಸುದ್ದಿಗಳು ಬರುತ್ತಿದ್ದು, ಇದು ಸಂಭ್ರಮದ ಸಮಯವಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಇತರೆ ಜಿಲ್ಲೆಯಲ್ಲಿ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜಿಲ್ಲೆಯ ಜನರಾದ ನಾವು ತುಂಬಾ ಜಾಗ್ರತೆ ವಹಿಸಬೇಕಿದೆ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮನೆಯಿಂದ ಹೊರಬಾರದಿರುವುದೇ ಕೊರೋನಾ ಸೋಂಕು ತಡೆಯುವ ಏಕೈಕ ಮಾರ್ಗವಾಗಿದ್ದು, ಲಾಕ್ ಡೌನ್ ಮುಗಿಯವವರೆಗೂ ಇದನ್ನು ಜನತೆ ಪಾಲಿಸಲೇಬೇಕು ಎಂದರು.
ಕಲಬುರಗಿ ರೆಡ್ ಝೋನ್‍ನಲ್ಲಿ ಸೇರದಿರಲಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೆಲವು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗುತ್ತಿದೆ. ರೆಡ್ ಝೋನ್‍ನಲ್ಲಿ ಕಲಬುರಗಿ ಜಿಲ್ಲೆ ಸೇರಬಾರದು. ಇದಕ್ಕಾಗಿ ಜನರು ಅನಾವಶ್ಯಕ ಮನೆಯಿಂದ ಹೊರಗಡೆ ಬರಬಾರದು ಮತ್ತು ಕಡ್ಡಾಯ ಸಾಮಾಜಿಕ ಅಂತಕ ಕಾಪಾಡುವುದರ ಮೂಲಕ ಕೊರೋನಾ ಸೋಂಕಿನ ಚೈನ್ ಮುರಿಯಬೇಕಿದೆ ಎಂದರು.
ಕೆ.ಎಸ್.ಆರ್.ಪಿ. ತುಕಡಿ ನಿಯೋಜಿಸಲಾಗುವುದು: ಜಿಲ್ಲೆಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಅನುಷ್ಟಾನಕ್ಕೆ ತರಲು ರಾಜ್ಯದ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ, ಲೊಕೋಪಯೋಗಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರ ನಿರ್ದೇಶನದಂತೆ ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಆಯುಕ್ತರನ್ನು ಕೋರಲಾಗುವುದು ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.