ಆಳಂದ: ತಾಲೂಕಿನ ಕೃಷಿ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡುವಂತೆ ಮತ್ತು ಕೃಷಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಕೃಷಿ ಸಚಿವರಾದ ಬಿ ಸಿ ಪಾಟೀಲರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಮನವಿ ಮಾಡಿಕೊಂಡರು.
ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಆಳಂದ ತಾಲೂಕಿನ ಲಾಡ ಚಿಂಚೋಳಿಯ ರೈತ ಚಂದ್ರಕಾಂತ ಬಿರಾದಾರ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಕೃಷಿ ಸಚಿವರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಲಿಖಿತ ಮನವಿ ಪತ್ರ ನೀಡಿದರು.
ಆಳಂದ ಮತಕ್ಷೇತ್ರದಲ್ಲಿ ಹೆಚ್ಚಿನ ಭೂಪ್ರದೇಶವು ಮಳೆಯಾಶ್ರಿತ ಪ್ರದೇಶ ಆಗಿರುವುದರಿಂದ ರೈತರು ಹೆಚ್ಚಿನ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಆಳಂದ ಮತಕ್ಷೇತ್ರಕ್ಕೆ ೧ ಸಾವಿರ ಕೃಷಿ ಹೊಂಡಗಳನ್ನು ಮಂಜೂರಿ ಮಾಡಬೇಕು ಎಂದರು.
ಆಳಂದ ತಾಲೂಕಿನಲ್ಲಿ ೮೫ ಸಾವಿರ ಹೆಕ್ಟರನಷ್ಟು ತೊಗರಿ ಬೆಳೆಲಾಗುತ್ತದೆ ಕೆಲವೊಂದು ಸಂದರ್ಭದಲ್ಲಿ ಮಾರುಕಟ್ಟೆ ದರ ಕುಸಿದಾಗ ರೈತರು ಬೆಳೆದ ತೊಗರಿ ಸಂಗ್ರಹಿಸಿಟ್ಟುಕೊಳ್ಳಲು ತೊಂದರೆಯಾಗುತ್ತಿದೆ ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿ ಹೊಬಳಿಗೊಂದು ಉಗ್ರಾಣ ನಿರ್ಮಾಣ ಮಾಡಬೇಕು ಇದರಿಂದ ರೈತಾಪಿ ವರ್ಗದವರಿಗೆ ಅನೂಕೂಲವಾಗಲಿದೆ ಎಂದು ಮನವರಿಕೆ ಮಾಡಿದರು.
ತೋಟಗಾರಿಕಾ ಬೆಳೆಗಳಾದ ಕಲ್ಲಂಗಡಿ, ಪಪ್ಪಾಯಿ ಸೇರಿದಂತೆ ಹಲವು ಬೆಳೆಗಳು ಕಟಾವಿನ ಹಂತಕ್ಕೆ ಬಂದಿವೆ ಕೆಲವು ಕಡೆ ಕಟಾವು ಮಾಡಿದರೂ ಮಾರುಕಟ್ಟೆ ಬಂದ್ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಕಟಾವು ಮಾಡಿರುವ ಬೆಳೆಗಳನ್ನು ಸರ್ಕಾರದಿಂದಲೇ ಖರೀದಿ ಮಾಡಬೇಕು ಹಾಗೂ ಕಟಾವು ಮಾಡಿಯೂ ಖರೀದಿ ಆಗದೇ ಹಾಗೇ ಉಳಿದಿರುವ ಬೆಳೆಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಮುಖಂಡರಾದ ಹಣಮಂತರಾವ ಮಲಾಜಿ, ಗುರುನಾಥ ಸೊನ್ನದ, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಸೇರಿದಂತೆ ಇತರರು ಇದ್ದರು.