ಅಕ್ಕ: ಇ-ಮೀಡಿಯಾ ಲೈನ್ ಕವಿತೆ

1
102
ಅಕ್ಕ. 
ಹಿಂದೆಯೂ ಹುಟ್ಟಿಲ್ಲ
ಮುಂದೆಯೂ ಹುಟ್ಟಲಿಲ್ಲ
ಹಿಂದು-ಮುಂದುಗಳಿಗೆ ಎಲ್ಲಾ ಒಂದೇ ಬೆಳಕು ‘ಅಕ್ಕ’.
ಸ್ವರ್ಗದಲ್ಲಿ ದೇವಿ-ಶಕ್ತಿ
ಮರ್ತ್ಯದಲ್ಲಿ ಅರಸಿ-ಗರತಿ
ಎಲ್ಲೆಡೆಯೂ ಆದಳು
ಹೆಣ್ಣು ಬಹುರೂಪಿ…
ಹೆಣ್ಣೆಂದು ಕಂಗೆಡಲಿಲ್ಲ
ದೇವಿಯಾಗಿ ಕೊಲ್ಲಲಿಲ್ಲ
ಹುಲಿ-ಕುದುರೆಯನೇರಲಿಲ್ಲ
ಯಾವ ಕಾಲಿಗೂ ಅಡಿಯಾಗಲಿಲ್ಲ…
ಎಂಥ ಬೆರಗು’ ಅಕ್ಕ’…!
ಮೈ-ಮನಕೆ ಎಳಸಲಿಲ್ಲ
ಕೌಶಿಕನನು ಬಳಸಲಿಲ್ಲ
ಮೇರು ಗಿರಿಗೆ
ಬಯಲಂತೆ ಜೋಡಿಯಾದ ಳಲ್ಲ…!
ಮೊಗದ ನಗುವ
ಮನದ ನೋವ
ಜಗದ ಹೆಣ್ಣಿಗೆ
ಸಂದ ಹೂವ
ಅಕ್ಕ ಮಾಲೆ ಕಟ್ಟಲಿಲ್ಲ
ಮತ್ತೆ ಜಡೆಗೆ ಮುಡಿಯಲಿಲ್ಲ
ಜೊಳ್ಳು-ಧೂಳು ಬಾಚಿಕೊಂಡ
ತಲೆಯ ಕೇಶ ಕೆದರಿ ಬಿಚ್ಚಿ
ಬೋಳು ಮಂಡೆಗೊಂದು
ದೊಡ್ಡ ಗುಡ್ಡವಾದಳಲ್ಲ…
ಕಲ್ಲ ರೂಪದಲ್ಲಿ
ಚೆಲುವ ಚೆನ್ನನನ್ನು
ಕಾಣ್ಬ ಕಣ್ಗೆ
ಬಿಲ್ವ-ಬೆಳವದ ಭೇದವನಿಟ್ಟ
ಅರಿವಿನ ನಿಧಿಯು ಅಕ್ಕ…
ಸೊಲ್ಲು ಸೊಲ್ಲಿಗೆ ಮಲ್ಲನೆನುವ
ಶುಕ ಹಂಸ ಕೋಗಿಲೆಗೆ
ಚೆಲುವ ಇನಿಯನ ವಿಳಾಸವಿತ್ತ
ಚೆನ್ನನ ಚೆನ್ನೆ ಅಕ್ಕ…
ಪ್ರಭುವಿಂಗೆ ಸಮನಾಗಿ
ಬಸವಂಗೆ ಒಲುಮೆಯಾಗಿ
ಕಿನ್ನರಯ್ಯ ಶರಣರಿಗೆ
ನೆರಳಾಗಿ ಹೂವಾಗಿ
ಕಲ್ಯಾಣದ ಜಗಕೆ
ಸಿರಿಯಾದಳು ಅಕ್ಕ..
ಕಂದಿ ಕುಂದಿ ಕರಗುವ
ಕಾಯವನು ಕಂಗೆಡಿಸಿ
ಶಿವಯೋಗದ ಕದಳಿಯಲ್ಲಿ
ಬೆಳಕಾದಳು ಅಕ್ಕ…
ದಿನವೂ ಸುಳಿದಾಡುವಳು
ನಮ್ಮ ಅಕ್ಕ-ಪಕ್ಕ…
-೦೦೦-
ಕೆ.ಶಶಿಕಾಂತ
ಲಿಂಗಸೂಗೂರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here