ಕಲಬುರಗಿ: ಕೊರೋನಾ ವೈರಸ್ ರೋಗ ಲಕ್ಷಣಗಳಿರುವವರ ಬಗ್ಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಶರತ್.ಬಿ ಅವರು ಎಚ್ಚರಿಕೆ ನೀಡಿದ್ದಾರೆ. ಶಂಕಿತ ಕೊರೋನಾ ರೋಗಿಗಳನ್ನು ಬಹಳಷ್ಟು ದಿನಗಳ ಕಾಲ ಆಸ್ಪತ್ರೆ ಗಳಲ್ಲಿ ದಾಖಲಿಸಿಕೊಂಡು ರೋಗ ಉಲ್ಬಣಿಸಿದ ಬಳಿಕ ಇಎಸ್ಐ ಮತ್ತು ಜಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಟಾರ್ ಆಸ್ಪತ್ರೆ ಸಿಬ್ಬಂದಿಯು ಕೊರೋನಾ ರೋಗ ಲಕ್ಷಣವುಳ್ಳ ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಿರುವುದಿಲ್ಲ. ಜೊತೆಗೆ ಆಸ್ಪತ್ರೆ ಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿರುವುದಿಲ್ಲ.ಈ ಹಿನ್ನೆಲೆಯಲ್ಲಿ ಸ್ಟಾರ್ ಆಸ್ಪತ್ರೆ ಯನ್ನು ಬಂದ್ ಮಾಡಲಾಗಿದೆ. ಅದೇ ರೀತಿ ಬಹಮನಿ ಆಸ್ಪತ್ರೆಯನ್ನು ಬಂದ್ ಮಾಡಿ, ಸಿಬ್ಬಂದಿಯನ್ನು ಕ್ವಾರೈಂಟೀನ್ ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡುವ ಯತ್ನ ನಡೆದಿದೆ. ಇದು ಸ್ವತಃ ಜಿಲ್ಲಾಡಳಿತ ಅಥವಾ ಜಿಲ್ಲಾಧಿಕಾರಿಗಳ ಮೇಲೆ ನಡೆಸಿರುವ ಹಲ್ಲೆಯಂತಾಗಿದೆ. ಹಲ್ಲೆನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಶಾ ಕಾರ್ಯಕರ್ತೆಯರು ಸರ್ಕಾರದ ಆದೇಶದ ಮೇರೆಗೆ ಆರೋಗ್ಯ ತಪಾಸಣೆಗೆ ಮನೆ-ಮನೆಗೆ ಭೇಟಿ ನೀಡುತ್ತಾರೆ. ಜನಗಣತಿ, ಎನ್ ಪಿ ಆರ್ ಮತ್ತಿತರ ಯಾವುದೇ ಸರ್ವೇ ಮಾಡಿಸುತ್ತಿಲ್ಲ. ಅವರಿಗೆ ಸಹಕಾರ ನೀಡಬೇಕೆಂದು ಎಂದು ಅವರು ಕೋರಿದ್ದಾರೆ.
ದೆಹಲಿ ಮತ್ತು ಇತರೆಡೆ ತೆರಳಿದ್ದ ಜಮಾತ್ ತಬ್ಲೀಘಿ ಸದಸ್ಯರು ಮುಕ್ತವಾಗಿ ಮುಂದೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇನ್ನು ನಗರದ ಆಸ್ಪತ್ರೆಗಳಲ್ಲಿರುವ ಆರೋಗ್ಯ ಕಾರ್ಯಕರ್ತೆಯರು ರೋಗಿಗಳನ್ನು ಸರಿಯಾಗಿ ಪ್ರಾಥಮಿಕ ಪರೀಕ್ಷೆ ಕೂಡ ನಡೆಸದೆ, ಇಎಸ್ಐ ಆಸ್ಪತ್ರೆ ಗೆ ಹೋಗುವಂತೆ ಶಿಫಾರಸ್ಸು ಮಾಡುತ್ತಿರುವುದು ತಿಳಿದು ಬಂದಿದೆ. ಈ ಸಂಬಂಧ ನಿರ್ಲಕ್ಷ್ಯ ತೋರುವ “ಡಿ” ಗ್ರೂಪ್ ನಿಂದ ಹಿಡಿದು ವೈದ್ಯರ ವರೆಗೆ ಆರೋಗ್ಯ ತುರ್ತುಪರಿಸ್ಥಿತಿ ಉಲ್ಲಂಘನೆ ಆರೋಪದ ಮೇಲೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಮದು ಎಚ್ಚರಿಕೆ ನೀಡಿದ್ದಾರೆ.