ವಾಡಿ: ನಾಲವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸತತವಾಗಿ ಗೈರು ಹಾಜರಿ ಇರುತ್ತಿದ್ದು, ಗ್ರಾಮೀಣ ಭಾಗದ ರೋಗಿಗಳು ಆರೋಗ್ಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಕಡಬೂರ ಗ್ರಾಪಂ ಉಪಾಧ್ಯಕ್ಷ ಶ್ರೀಮಂತ ಭಾವೆ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಮಂತ ಭಾವೆ, ನಾಲವಾರ ಹೊಬಳಿ ವಲಯದ ಕಡಬೂರ, ಕೋಲಕುಂದಿ, ತುನ್ನೂರ, ಸುಗೂರ (ಎನ್), ಮಾರಡಗಿ ಹೀಗೆ ಹತ್ತಾರು ಗ್ರಾಮಗಳಿಗೆ ನಾಲವಾರ ಆಸ್ಪತ್ರೆಯೇ ಆಸರೆಯಾಗಿದೆ. ಕೊರೊನಾ ವೈರಸ್ ಭೀತಿ ಎಲ್ಲಡೆ ಹಬ್ಬಿದ್ದು, ಕೆಮ್ಮು, ಜ್ವರ ಹಾಗೂ ನೆಗಡಿ ಬಂದವರು ಆಸ್ಪತ್ರೆಗೆ ಓಡುತ್ತಿದ್ದಾರೆ.
ಆದರೆ ವೈದ್ಯರು ಮಾತ್ರ ಕರ್ತವ್ಯದಲ್ಲಿ ಇರುವುದಿಲ್ಲ. ಕೇವಲ ಸ್ಪಾಪ್ ನರ್ಸ್‌ಗಳು ಮಾತ್ರ ರೋಗಿಗಳನ್ನು ಉಪಚರಿಸುತ್ತಾರೆ. ಮಾತ್ರೆಗಳನ್ನು ಕೊಟ್ಟು ಕಳಿಸುತ್ತಾರೆ. ರೋಗಿಯನ್ನು ಸ್ಪಂದಿಸಬೇಕಾದ ವೈದ್ಯರು ಆಸ್ಪತ್ರೆಗೆ ಬರದೆ ಸಂಬಳ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿಗಳು ಒಮ್ಮೆ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಜನರ ಆರೋಗ್ಯ ಸಮಸ್ಯೆಗಳನ್ನು ಅರಿತು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.