-
ಶಿವರಂಜನ್ ಸತ್ಯಂಪೇಟೆ
ಆತ ಮೂಲತಃ ಉತ್ತರ ಪ್ರದೇಶದ ನಿವಾಸಿ. ಹೊಟ್ಟೆಪಾಡಿಗಾಗಿ ಹೆಂಡತಿ ಮಕ್ಕಳ ಸಮೇತ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣಕ್ಕೆ ವಲಸೆ (ಗುಳೆ) ಬಂದು ಸುಮಾರು ಐದಾರು ತಿಂಗಳಾಗಿರಬಹುದು.
ಇದಕ್ಕೂ ಮುಂಚೆ ಆತ ಒಂದೆರಡು ವರ್ಷ ಈಗ ವಾಸವಿರುವ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದ. ದಿನಾ ಬೆಳಗಿನಿಂದ ರಾತ್ರಿವರೆಗೆ ಮನೆ ಹತ್ತಿರವಿರುವ ರೈಲ್ಬೆ ಸ್ಟೇಶನ್ ಗೆ ತೆರಳಿ ಬರುವ-ಹೋಗುವ ರೈಲು ಹತ್ತಿ ಮಕ್ಕಳ ಆಟಿಕೆ ಸಾಮಾನು, ಗೃಹಬಳಕೆಯ ವಸ್ತುಗಳು, ಇಲ್ಲವೇ ಕುರುಕುಲು ತಿಂಡಿಗಳನ್ನು ಮಾರಾಟ ಮಾಡಿ ತನ್ನ ಇಡೀ ಕುಟುಂಬದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ.
ಈತನಿಗೆ ನಾಲ್ಕು ವರ್ಷದ ಹೆಣ್ಣು ಮಗು, ಎರಡು ವರ್ಷದ ಗಂಡು ಮಗುವಿತ್ತು. ಹೀಗೆ ಸಂಸಾರದ ನೊಗ ಸಾಗಿಸುತ್ತಿದ್ದ ಈತನ ಹೊಟ್ಟೆ ಮೇಲೆ “ಕೊರೊನಾ” ಎಂಬ ಹೆಮ್ಮಾರಿಯ ಹೊಡೆತ ಬಿತ್ತು.
ಏಕದಂ ಟ್ರೇನ್ ಬಂದ್ ಆದವು. ಇನ್ಮೇನು ಮತ್ತೊಂದು ವಾರದಲ್ಲಿ ಟ್ರೇನ್ ಚಾಲೂ ಆಗಿ ಮತ್ತೆ ಸಂಸಾರದ ಟ್ರೇನ್ ಮುನ್ನಡೆಸಬೇಕೆಂದುಕೊಂಡಿದ್ದ ಈತನಿಗೆ ಲಾಕ್ ಡೌನ್ ನಿಂದ ಏನು ಮಾಡಬೇಕೋ ತಿಳಿಯದಾಯಿತು.
ತನ್ನೂರಿಗೆ ಹೋಗಬೇಕೆಂದರೆ ಟ್ರೇನ್ ಬಂದಾಗಿವೆ. ಇನ್ನೇನಪ್ಪ ಮಾಡಬೇಕು ಎಂಬ ಯೋಚನೆಯಲ್ಲಿಯೇ ಇತ್ತೀಚಿಗೆ ಆತ ಮುಳುಗಿರುತ್ತಿದ್ದ ಎಂದು ಆಜು ಬಾಜು ಮನಿಯವರು ಹೇಳುತ್ತಾರೆ.
ಮೊನ್ನಿ ದಿನ ಮಧ್ಯಾಹ್ನದ ವೇಳೆಗೆ ಎರಡು ವರ್ಷದ ಆತನ ಮಗು ಆಡಾಡ್ತಾ ಸಿಡಿ ಏರಿ ಬಿದ್ದು ಬಿಟ್ಟಿತು. ಸ್ವಲ್ಪ ಹೆಚ್ಚಿಗೆ ಪೆಟ್ಟಾಗಿದ್ದರಿಂದ ಕಲಬುರಗಿಯ ಜಿಲ್ಲಾ ಆಸ್ಪತ್ರೆಗೆ ಮಗುವನ್ನು ಕರೆ ತರಲಾಯಿತು.
ವೈದ್ತಕೀಯ ತಪಾಸಣೆಯ ನಂತರ ಆ ಮುಗ್ದ ಮಗುವಿಗೂ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಪಾಸಿಟಿವ್ ಇದೆ ಎಂದು ಪ್ರಾಥಮಿಕ ವರದಿಯಲ್ಲಿಯೇ ತಿಳಿದು ಬಂದಿತು.
ನಂತರದ ಪರೀಕ್ಷೆಯಲ್ಲೂ ಆ ಮಗುವಿಗೆ ಸೋಂಕು ಇರುವುದು ದೃಢಪಟ್ಟಿತು. ಇದಕ್ಕೂ ಮುನ್ನ ಆತ ವಾಸವಾಗಿದ್ದ ಮನೆಗೆ ಬ್ಯಾರಿಕೇಡ್ ಹಾಕಿ ಆತನನ್ನು ಕುಟುಂಬ ಸಮೇತ ಆಸ್ಪತ್ರೆಗೆ ಕರೆ ತಂದು ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಕೊರೊನಾ ಎಂಬ ಹೆಮ್ಮಾರಿಗೆ ಆ ದೈತ್ಯ ಅಮೆರಿಕ ಕೂಡ ತತ್ತರಿಸಿರುವಾಗ ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರದ ಈ ಬಡಪಾಯಿ ಯಾವ ಲೆಕ್ಕ? ಓ ಕೆರೊನಾ ನಿನಗಿಲ್ಲವೇ ಕರುಣೆ.