ಆಳಂದ: ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿ ಹಳ್ಳಿಯಲ್ಲಿನ ಮನೆ ಮನೆಗೆ ಭೇಟಿ ನೀಡಿ ವೈದ್ಯರು ತಪಾಸಣೆ ಮಾಡಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಸೂಚನೆ ನೀಡಿದರು.
ಸೋಮವಾರ ಆಳಂದನ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರುಗಳ ಸಭೆಯಲ್ಲಿ ಶಾಸಕರು ಮಾತನಾಡಿದರು. ಪ್ರತಿ ಮನೆಗೂ ಭೇಟಿ ಸ್ಕ್ರೀನಿಂಗ್ ಪರೀಕ್ಷೆ ಮಾಡಬೇಕು ಏಕೆಂದರೆ ಹೊರಗಡೆಯಿಂದ ಬಂದಿರುವ ಹಲವು ಜನರು ಮಾಹಿತಿ ನೀಡದೇ ಮನೆಯಲ್ಲಿಯೇ ಇದ್ದಾರೆ ಅವರಲ್ಲಿ ಯಾರಿಗಾದರೂ ಸೋಂಕು ಇದ್ದರೆ ಅದರಿಂದ ಇಡೀ ಪರಿಸರಕ್ಕೆ ಸುತ್ತಿಕೊಳ್ಳುವ ಸಾಧ್ಯತೆ ಇರುವುದರಿಂದ ವೈದ್ಯರು ಮನೆ ಮನೆ ಭೇಟಿ ನೀಡಿ ತಪಾಸಣೆ ಮಾಡಬೇಕು ಎಂದು ಹೇಳಿದರು.
ಸರ್ಕಾರಿ ಮತ್ತು ಖಾಸಗಿ ವೈದ್ಯರು ತಂಡವನ್ನು ಮಾಡಿಕೊಂಡು ತಪಾಸಣೆ ನಡೆಸಬೇಕು ತಪಾಸಣೆಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ, ಮನೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ತಪಾಸಣೆಯ ಶುಲ್ಕವನ್ನು ಖಾಸಗಿ ವೈದ್ಯರು ರಿಯಾಯತಿ ದರದಲ್ಲಿ ಪಡೆದುಕೊಳ್ಳಲು ಅಥವಾ ಮುಕ್ತವಾಗಿ ಮಾಡಲು ಮನವಿ ಮಾಡಿಕೊಂಡರು.
ಸಭೆಯಲ್ಲಿ ಭಾಗವಹಿಸಿದ್ದ ಸಿಪಿಐ ಶಿವಾನಂದ ಗಾಣಿಗೇರ, ಆಸ್ಪತ್ರೆಗಳ ಮುಂದೆ ಟೆಂಟ್ ಹಾಕಿಕೊಳ್ಳಲು ಸೂಚಿಸಿದರು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಸಭೆಯಲ್ಲಿ ತಹಸೀಲದಾರ ದಯಾನಂದ ಪಾಟೀಲ, ಇಒ ಸಂಜಯರೆಡ್ಡಿ, ತಾಲೂಕಾ ವೈದ್ಯಾಧಿಕಾರಿ ಡಾ. ಅಭಯಕುಮಾರ, ಕಂದಾಯ ಇಲಾಖೆಯ ಬಿ ಜಿ ಕುದರಿ, ಡಾ. ಎಸ್ ಆರ್ ಬೆಡಗೆ, ಡಾ. ಪಿ ಎನ್ ಶಹಾ, ಡಾ. ಕಟಂಬಲೆ, ಡಾ. ಮೋಹನ ಜಿಡ್ಡಿಮನಿ, ರೋಹಿತ ಬಂಡಗಾರ, ಡಾ. ಉಸ್ಮಾನ, ಡಾ. ಎಸ್ ಆರ್ ಶಹಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.