ಕಲಬುರಗಿ: ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೨೯ ನೆಯ ಜನ್ಮ ದಿನಾಚರಣೆಯ ಅಂಗವಾಗಿ ಪೌರಕಾರ್ಮಿಕರಿಗೆ ಗೌರವ ಅರ್ಪಣೆ ಕಾರ್ಯಕ್ರಮ ಹಮಲವಾಡಿಯ ಮಹಮ್ಮದ್ ಹಸನ ಖಾನ್ ಭವನ ಜರುಗಿತು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಕಾ. ಮಾರುತಿ ಮಾನ್ಪಡೆ ಮಾತನಾಡಿ, ದೇಶದಾದ್ಯಂತ ಕೊರೊನ ಮಹಾ ಪಿಡುಗು ಸವಾಲಾಗಿ ಬಂದಿದೆ. ಪೌರಕಾರ್ಮಿಕರು ಜೀವದ ಹಂಗು ತೊರೆದು ಸ್ವಚ್ಚತಾ ಕೆಲಸ ನಿರ್ವಹಿಸುತಿದ್ದಾರೆ, ಪೌರ ಕಾರ್ಮಿಕರ ಕೆಲಸವು ಮಾನವ ಕಲ್ಯಾಣದ ಕೆಲಸವಾಗಿದೆ. ಪ್ರಧಾನ ಮಂತ್ರಿ ಚುನಾವಣೆ ಸಂದರ್ಭದಲ್ಲಿ ಪೌರ ಕಾರ್ಮಿಕರ ಪಾದಪೂಜೆ ನಡೆಸಿದ್ದು ಚುನಾವಣಾ ತಂತ್ರಗಾರಿಕೆ ಆಯಿತೆ ವಿನಹ ಕಾರ್ಮಿಕರ ಕಲ್ಯಾಣವಾಗಲಿಲ್ಲ, ರಾಷ್ಟ್ರೀಯ ಸ್ವಚ್ಚತಾ ಆಂದೋಲನದ ಜಾಹಿರಾತಿಗಾಗಿ ಖರ್ಚು ಮಾಡಿದಷ್ಟು ಹಣವನ್ನು ಪೌರ ಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕೆ ಖರ್ಚು ಮಾಡದೆ ಇರುವದೆ ಎದ್ದು ಕಾಣುತ್ತದೆ ಎಂದು ಟಿಕಿಸಿದರು.
ಹಲವು ಕಷ್ಟಗಳ ನಡುವೆಯೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಗೌರವ ಪೂರ್ಣ ಅಭಿನಂದನೆ ಸಲ್ಲಿಸಲಾಗುತ್ತಿದೆ. ಇಂತಹ ಅನ್ಯಾಯಗಳ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನ ಪಯಂತ ಹೋರಾಟ ನಡೆಸಿದ್ದಾರೆ, ಅಂತಹ ಮಹಾನುಭಾವರ ಜನ್ಮದಿನದಂದು ನಮ್ಮ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸುತಿದ್ದೇವೆ.
ದೇಶದಲ್ಲಿ-ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಮೀಸಲಾತಿಯನ್ನೆ ಅಪಾಯಕ್ಕೆ ತಳ್ಳಿವೆ, ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ವಾದ ಮಂಡಿಸದೆ ಇರುವದರಿಂದ ದಲಿತ ವಿರೋಧಿ ತೀರ್ಪು ಬಂದಿದೆ, ಸರಕಾರವು ಸಂವಿಧಾನಿಕ ತಿದ್ದುಪಡಿ ತಂದು ದಲಿತರ ಮೀಸಲಾತಿಯನ್ನು ಸಂರಕ್ಷಿಸಬೇಕೆಂದು ಒತ್ತಾಯಿಸುತ್ತಾ, ಗುತ್ತಿಗೆ-ಹೊರಗುತ್ತಿಗೆ ಪದ್ಧತಿಯನ್ನು ಕೇಂದ್ರ ರಾಜ್ಯ ಸರ್ಕಾರಗಳು ವ್ಯಾಪಕವಾಗಿ ಜಾರಿ ಮಾಡಿರುವುದರಿಂದ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಇಲ್ಲದೆ ದಲಿತ ಸಮುದಾಯ ಅನ್ಯಾಯಕ್ಕೆ ಒಳಗಾಗಿದೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನದ ಅಸ್ತಿತ್ವವೇ ಅಪಾಯಕ್ಕೆ ಒಳಗಾಗಿದೆ, ಸಂವಿಧಾನದ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಸಂಚಾಲಕರಾದ ಪಾಂಡುರಂಗ ಮಾವಿನಕರ್, ಸುಧಾಮ ಧನ್ನಿ, ಪ್ರಾಂತ ರೈತ ಸಂಘದ ಅಶೋಕ ಮ್ಯಾಗೆರಿ, ಶಾಂತಪ್ಪ ಪಾಟೀಲ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಗಂಗಮ್ಮ ಬಿರೆದಾರ ಮತ್ತು ಎಸ್. ಎಫ್. ಐ.ನ ಕಾರ್ಯದರ್ಶಿ ಸಿದ್ಧಲಿಂಗ ಪಾಳಾ ಮಾತನಾಡಿದರು.