ಕಲಬುರಗಿ: ಧರ್ಮಸಿಂಗ್ ಫೌಂಡೇಷನ್ ನಿಂದ ಜೇವರ್ಗಿ ತಾಲೂಕಿನ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು, ಭಿಕ್ಷುಕರು ಮತ್ತು ನಿರ್ಗತಿಕರಿಗೆ ಸಿದ್ಧ ಅಹಾರ ಪೂರೈಸಲು ತಾಲೂಕು ಆಡಳಿತಕ್ಕೆ ಮಂಗಳವಾರ 100 ಕ್ವಿಂಟಾಲ್ ಅಕ್ಕಿ ಸೇರಿದಂತೆ ಆಹಾರ ಸಿದ್ದಪಡಿಸಲು ಅಗತ್ಯವಿರುವ ಮಸಾಲೆ ಪದಾರ್ಥ ಮತ್ತು ತರಕಾರಿಯನ್ನು ತಹಶೀಲ್ದಾರ ಸಿದ್ಧರಾಯ ಭಾಸಗಿ ಅವರಿಗೆ ಶಾಸಕ ಡಾ.ಅಜಯ ಸಿಂಗ್ ದೇಣಿಗೆಯಾಗಿ ನೀಡಿದರು.
ಇದರಲ್ಲಿ ಜೇವರ್ಗಿ ತಾಲೂಕಿನ 42 ಗ್ರಾಮ ಪಂಚಾಯತಿಗಳ 1500 ಕುಟುಂಬಗಳ 5600 ಜನ ಬಡವರು, ಕೂಲಿ ಕಾರ್ಮಿಕರು, ಭಿಕ್ಷುಕರು ಮತ್ತು ನಿರ್ಗತಿಕರಿಗೆ ಸಿದ್ಧ ಅಹಾರ ಪೂರೈಸಲು ಬೇಕಾದ ಅಗತ್ಯ ಪ್ರಮಾಣದ ಆಹಾರಧಾನ್ಯ, ತರಕಾರಿ ನೀಡಲಾಗಿದೆ ಎಂದು ಶಾಸಕ ಡಾ.ಅಜಯ ಸಿಂಗ್ ತಿಳಿಸಿದರು.
ಈ ಆಹಾರಧಾನ್ಯ, ತರಕಾರಿಯನ್ನು ಉಪಯೋಗಿಸಿಕೊಂಡು ಗ್ರಾಮ ಮಟ್ಟದಲ್ಲಿ ಬಿಸಿಯೂಟ ಸಿಬ್ಬಂದಿಯಿಂದ ಆಹಾರ ತಯ್ಯಾರಿಸಿ ಸಿದ್ಧ ಆಹಾರ ವಿತರಿಸಲಾಗುವುದು ಎಂದು ತಹಶೀಲ್ದಾರ ಸಿದ್ದರಾಯ ಭಾಸಗಿ ಹೇಳಿದರು. ಈ ಸಂದರ್ಭದಲ್ಲಿ ಕಲಬುರಗಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಇದ್ದರು.
ಧರ್ಮಸಿಂಗ್ ಫೌಂಡೇಷನ್ ಪ್ರಸ್ತುತ ಜೇವರ್ಗಿ ಪಟ್ಟಣದ 600 ಜನರಿಗೆ ಪ್ರತಿದಿನ ತಾಲೂಕು ಅಡಳಿತ ಸಹಾಯದೊಂದಿಗೆ ಸಿದ್ಧ ಆಹಾರ ವಿತರಿಸುತ್ತಿದೆ.