ಸುರಪುರ: ಇಂದು ಜಗತ್ತಿಗೆ ಮಹಾಮಾರಿಯಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿರ್ಮೂಲನೆಗಾಗಿ ದೇಶದಲ್ಲಿ ಲಾಕ್‍ಡೌನ್ ನಿಯಮ ಜಾರಿಗೊಳಿಸಲಾಗಿದೆ. ಆದ್ದರಿಂದ ಈ ವರ್ಷ ಸರಕಾರದ ಆದೇಶದಂತೆ ಎಲ್ಲೆಡೆ ಡಾ:ಬಾಬಾ ಸಾಹೇಬ್ ಅಂಬೇಡ್ಕರರ ಜಯಂತಿಯನ್ನು ಸರಳವಾಗಿ ಆಚರಿಸಿ ಅಂಬೇಡ್ಕರರಿಗೆ ಗೌರವ ಸಲ್ಲಿಸೋಣ ಎಂದು ತಹಸೀಲ್ದಾರ ನಿಂಗಣ್ಣ ಬಿರಾದಾರ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯ ಡಾ:ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 129 ನೇ ಜಯಂತಿ ಆಚರಣೆ ಅಂಗವಾಗಿ ಅಂಬೇಡ್ಕರರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮಿಸಿ ಮಾತನಾಡಿ, ಎಲ್ಲರು ಕೊರೊನಾ ವೈರಸ್ ನಿರ್ಮೂಲನೆಗೆ ಮುಂದಾಗಿ ಲಾಕ್‍ಡೌನ್ ಆದೇಶ ಪಾಲಿಸಿ ಮನೆಯಲ್ಲಿರುವ ಮೂಲಕ ಜಯಂತಿಯನ್ನು ಗೌರವಿಸೋಣ ಎಂದರು.
ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 129ನೇ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ ನೇತೃತ್ವದಲ್ಲಿ ಅಂಬೇಡ್ಕರರ ಮೂರ್ತಿಗೆ ಮಾಲಾರ್ಪಣೆ ಮಾಡಿ,ಕ್ಯಾಂಡಲ್ ಬೆಳಗಿಸಿ ಪಂಚಶೀಲ ಪಠಣ ಮಾಡುವ ಮೂಲಕ ಜಯಂತಿ ಆಚರಿಸಿದರು.ಈ ಸಂದರ್ಭದಲ್ಲಿ ಮುಖಂಡ ಮಾನಪ್ಪ ಕಟ್ಟಿಮನಿ,ರಾಹುಲ್ ಹುಲಿಮನಿ, ಮಾಳಪ್ಪ ಕಿರದಳ್ಳಿ, ಆಕಾಶ ಕಟ್ಟಿಮನಿ,ರಾಜು ಕಟ್ಟಿಮನಿ, ಧರ್ಮು ಬಡಿಗೇರ,ರಮೇಶ ಬಾಚಿಮಟ್ಟಿ ಸೇರಿದಂತೆ ಅನೇಕರಿದ್ದರು.