ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಯನಿರ್ವಸುತ್ತಿರುವ ಕಲಬುರಗಿ ಕರೋನಾ ವಾರಿಯರ್ಸ್ (ಸೈನಿಕರು) ಮೂತ್ರಪಿಂಡ ಹಾಗೂ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ಇಬ್ಬರು ರೋಗಿಗಳಿಗೆ ತುರ್ತಾಗಿ ಬೇಕಾಗಿರುವ ಮಾತ್ರೆಗಳನ್ನು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಎಂಬ 67 ವರ್ಷದ ವೃದ್ದೆಗೆ ಒಂದು ವರ್ಷದ ಹಿಂದೆಯೆ ಮೂತ್ರಪಿಂಡ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಈ ರೋಗಿಗೆ ಪ್ರತಿ ಮಾಹೆ ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ನಿಂಬರಗಾ ಗ್ರಾಮಕ್ಕೆ ಕೊರೋನಾ ಸೈನಿಕರಾದ ನಾಗರಾಜ್ ಹೋಗಿ ತಲುಪಿಸಿದ್ದಾರೆ ಹಾಗೂ ಸೇಡಂ ತಾಲೂಕಿನ ಹಂಗನಳ್ಳಿ ಗ್ರಾಮದ ನಾಗಮ್ಮ ಎಂಬ 58 ವರ್ಷದ ವೃದ್ದೆಗೆ ಆರು ತಿಂಗಳ ಹಿಂದೆಯೆ ಅತೀಯಾದ ರಕ್ತದೊತ್ತಡ ಇರುವ ಪ್ರಯುಕ್ತ ಗುಲಬರ್ಗಾ ಹಾರ್ಟ್ ಫೌಂಡೇಶನ್ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಇವರಿಗೆ ವೈದ್ಯರು ಆರು ತಿಂಗಳು ಪ್ರತಿ ಮಾಹೆ ತಪ್ಪದೇ ಮಾತ್ರೆಗಳನ್ನು ಸೇವಿಸಲು ತಿಳಿಸಿದರು. ಲಾಕ್‍ಡೌನ್ ಪ್ರಯುಕ್ತ ಇವರು ಕಲಬುರಗಿಗೆ ಬಂದು ಮಾತ್ರೆಗಳನ್ನು ಪಡೆಯಲು ಅಸಾಧ್ಯವಾಗಿತ್ತು. ಕರೋನಾ ಸೈನಿಕರುಗಳಾದ ಹರ್ಷಲ್ ನಾಗರೇ ಮತ್ತು ರಾಜು ಜೇವರ್ಗಿ ಅವರು ತಮ್ಮ ಸ್ವಂತ ವಾಹನದಲ್ಲಿ ಹಂಗನಳ್ಳಿ ಗ್ರಾಮಕ್ಕೆ ಹೋಗಿ ಮಾತ್ರೆ ತಲುಪಿಸಿದ್ದಾರೆ. ಇವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಇವರ ಮೊಮ್ಮಗನಾದ ಸ್ವಪ್‍ನಿಲ್ ಹಾಗೂ ಹಂಗನಳ್ಳಿ ಗ್ರಾಮದ ನಾಗಮ್ಮ ಅವರ ಪುತ್ರಿ ಕು. ಸುಲೋಚನಾ ಎಂಬುವವರು ಕರ್ನಾಟಕ ಕೊರೋನಾ ಸೈನಿಕರ ತಂಡದ ವಾಟ್ಸ್‍ಆ್ಯಪ್ ಗ್ರೂಪ್‍ನಲ್ಲಿ ಲಾಕ್‍ಡೌನ್ ಇರುವ ಪ್ರಯುಕ್ತ ರೋಗಿಗಳಿಗೆ ಪ್ರತಿ ಮಾಹೆ ಸೇವಿಸಬೇಕಾದ ಮಾತ್ರೆಗಳನ್ನು ಪೂರೈಸುವಂತೆ ಮನವಿ ಮಾಡಿದರು.
ಬೆಂಗಳೂರಿನ ರಾಘವೆಂದ್ರ ಅವರು ಕಲಬುರಗಿ ಜಿಲ್ಲೆಯ ಕರೋನಾ ಸೈನಿಕರಾದ ನಾಗರಾಜ, ಹರ್ಷಲ್ ನಾಗರೆ ಹಾಗೂ ರಾಜು ಜೇವರ್ಗಿಯವರಿಗೆ ಈ ಟಾಸ್ಕ್‍ನ್ನು ಪೂರ್ಣಗೊಳಿಸುವಂತೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಕಲಬುರಗಿ ಕೊರೋನಾ ಸೈನಿಕರು ಟಾಸ್ಕ್‍ನ್ನು ಪೂರ್ಣಗೊಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವ ಕೊರೋನಾ ಸೈನಿಕರು ತಮಗೆ ಈ ಮಾತ್ರೆಗಳನ್ನು ತಂದು ಕೊಟ್ಟು, ನೆರವಾಗಿದ್ದಕ್ಕೆ ತಮಗೆ ತುಂಬಾ ಅನುಕೂಲವಾಗಿದೆ. ಇದಕ್ಕಾಗಿ ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಹಾಗೂ ಹಂಗನಳ್ಳಿ ಗ್ರಾಮದ ನಾಗಮ್ಮ ಅವರ ಮಗಳು ಸುಲೋಚನಾ ಅವರು ಕೊರೋನಾ ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.