ವಚನಸ್ಮೃತಿಯಲ್ಲಿದೆ ಭಯೋತ್ಪಾದನೆಗೆ ಮದ್ದು

0
191

ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಭಯೋತ್ಪಾದನೆ ವಿಷಯ ಕುರಿತು ಚರ್ಚೆ ನಡೆದಿತ್ತು. ಆ ಚರ್ಚೆಯಲ್ಲಿ ಮುಸ್ಲಿಂ ಹಾಗೂ ಹಿಂದೂ ಧರ್ಮಗಳ ಶ್ರೇಷ್ಠತೆಯನ್ನು ಎತ್ತಿ ಹೇಳುವ ಇಬ್ಬರು ಪ್ರಮುಖ ಧಾರ್ಮಿಕ ವ್ಯಕ್ತಿಗಳು, ನಮಗೆ ಮುಸ್ಲಿಂ ಧರ್ಮವೂ ಬೇಡ-ಹಿಂದೂ ಧರ್ಮವೂ ಬೇಡ. ನಮಗೆ ಬೇಕಿರುವುದು ಮಾನವೀಯತೆ ಎಂದು ವಾದಿಸುತ್ತಿದ್ದರು. ಇನ್ನಿಬ್ಬರು ವಿಚಾರವಾದಿ ವ್ಯಕ್ತಿಗಳು ಇದ್ದರು. ನಮ್ಮ ದೇಶದ ಅನ್ನ ತಿಂದು ಇಸ್ಲಾಮಿಕ್ ರಾಷ್ಟ್ರಕಟ್ಟುವ ಮುಸ್ಲಿಂರು ರಾಷ್ಟ್ರದ್ರೋಹಿಗಳು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಉಗ್ರಗಾಮಿ ಪಟ್ಟವನ್ನು ಇಡೀ ಮುಸ್ಲಿಂ ಜನಾಂಗಕ್ಕೆ ಮಾತ್ರ ಆರೋಪಿಸುವುದು ತಪ್ಪು ಎಂದು ಉತ್ತರಿಸುತ್ತಿದ್ದರು.

ಮುಸ್ಲಿಂ ಭಯೋತ್ಪಾದನೆ ಮತ್ತು ಹಿಂದೂ ಭಯೋತ್ಪಾದನೆ ಈ ಎರಡೂ ದೇಶಕ್ಕೆ ಗಂಡಾಂತರ. ಇವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ವಿಧ್ವಂಸಕ ಕೃತ್ಯ ನಡೆಸುವ ಎಲ್ಲರೂ ದೇಶದ್ರೋಹಿಗಳೇ! ಸಮತೆಯನ್ನು ಬೋಧಿಸುವ ಸಂವಿಧಾನವೇ ನಮ್ಮ ಧರ್ಮವಾಗಬೇಕು ಎಂದು ಇನ್ನಿಬ್ಬರು ಹೇಳುತ್ತಿದ್ದರು.

Contact Your\'s Advertisement; 9902492681

ಸುಮಾರು ಒಂದು ಗಂಟೆಗಳ ಕಾಲ ನಡೆದ ಆ ಚರ್ಚೆಯಲ್ಲಿ ನಾ ಮೇಲು, ನೀ ಕೀಳು, ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಶ್ರೇಷ್ಠ ಎಂದು ಪರಸ್ಪರ ಆರೋಪ, ದೂಷಣೆ, ಕಿತ್ತಾಟ ನಡೆಯಿತೆ ವಿನಃ ಯಾರೊಬ್ಬರೂ ಅಂತಿಮ ಸತ್ಯಕ್ಕೆ ಬಂದು ಮುಟ್ಟಲಿಲ್ಲ. ನಿರೂಪಕರು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಕೊನೆಗೆ ಕಾರ್ಯಕ್ರಮ ಮುಗಿಸಿಬಿಟ್ಟರು.

ಹೌದು, ಅವರು ಚರ್ಚಿಸುತ್ತಿರುವಂತೆ ಭಯೋತ್ಪಾದನೆ ಇಂದು ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರೋತ್ಸವ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ನಾಡಹಬ್ಬಗಳನ್ನು ಸಂತೋಷ-ಸಂಭ್ರಮದಿಂದ ಆಚರಿಸಬೇಕಿದ್ದ ನಾವುಗಳು ಇಂದು ಆ ದಿನಗಳನ್ನು ಭಯ, ಆತಂಕದಿಂದ ಎದುರಿಸುವಂತಾಗಿದೆ.

ಇವನಾರವ, ಇವನಾರವ
ಎಂದೆನಿಸದಿರಯ್ಯ
ಇವನಮ್ಮವ, ಇವ ನಮ್ಮವ
ಎಂದೆನಿಸಯ್ಯಾ
ಕೂಡಲ ಸಂಗಮದೇವ
ಇವ ನಮ್ಮ ಮನೆಯ ಮಗನೆಂದಿನಿಸಯ್ಯ

೧೨ನೇ ಶತಮಾನದ ವಚನ ಚಳವಳಿಯ ನೇತಾರ ಬಸವಣ್ಣನವರು ನಡೆದು ನುಡಿದ ಈ ವಚನದಂತೆ ಬದುಕಿದ್ದರೆ ಬಹುಶಃ ಇಂತಹ ಪರಿಸ್ಥಿತಿಯನ್ನು ನಾವು ಎದುರಿಸಬೇಕಾಗಿರಲಿಲ್ಲ. ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಭ್ರಮೆಯಲ್ಲಿರುವ ಹುಚ್ಚು ಯುವಕರಿಗೆ ಸತ್ತು ಸ್ವರ್ಗ ಸೇರುವುದಕ್ಕಿಂತ ಪರಸ್ಪರ ಪ್ರೀತಿ-ವಿಶ್ವಾಸದ ಕಲ್ಯಾಣ ರಾಜ್ಯ ಕಟ್ಟಬಹುದು ಎಂಬುದು ತಿಳಿದು ಬರುತ್ತಿತ್ತು. ಹಿಂದೂ ರಾಷ್ಟ್ರಕಟ್ಟುವ ಭರದಲ್ಲಿ ಸಮಾಜದಲ್ಲಿ ತ್ವೇಷಮಯ ವಾತಾವರಣ ಹುಟ್ಟು ಹಾಕುತ್ತಿರುವವರೇ ಇರುತ್ತಿರಲಿಲ್ಲ ಎಂದೆನಿಸುತ್ತದೆ.

ಜಗತ್ತು, ದೇಶ ಹಾಗೂ ಅಲ್ಲಿನ ಜನ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು, ಧರ್ಮ ಎನ್ನುವುದು ಅಫೀಮು ಆಗಬಾರದು. ಕಾಯಕದಲ್ಲೇ ಕೈಲಾಸ ಕಾಣಬೇಕು ಎಂದು ಲೋಕಕ್ಕೆ ಸಾರಿ ಹೇಳಿದ ಬುದ್ಧ, ಬಸವ, ವಿವೇಕರ ನಾಡಿನಲ್ಲಿ ಪರಸ್ಪರ ದ್ವೇಷ, ಮತ್ಸರ ಹೊಗೆಯಾಡುತ್ತಿರಲಿಲ್ಲ. ಆ ನೆಪದಲ್ಲಿ ಇಂತಹ ಭಯಾನಕ ಕೃತ್ಯಗಳು ನಡೆಯುತ್ತಿರಲಿಲ್ಲ.

ಸಮಾಜದಲ್ಲಿನ ಎಲ್ಲ ಜಾತಿ ಜನರು ಒಂದೇ. ಯಾರೂ ಮೇಲಲ್ಲ. ಕೀಳಲ್ಲ. ಆಚಾರದಂತೆ ವಿಚಾರವಿರಬೇಕು. ವಿಚಾರದಂತೆ ಆಚರಾವಿರಬೇಕು ಎಂದು ತಿಳಿ ಹೇಳಿದ ವಚನ ಸ್ಮೃತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಅಲ್ಲಿ ಭಯೋತ್ಪಾದನೆಗೆ ಖಂಡಿತ ಜಾಗವಿಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಿದೆ. ಸತ್ತು ಸ್ವರ್ಗ ಸೇರುವುದಕ್ಕಿಂತ ನಾವಿರುವ ಜಾಗದಲ್ಲೇ ಸ್ವರ್ಗ ಸೃಷ್ಟಿಸಬೇಕಿದೆ. ಕಾಣದ ದೇವರಿಗೆ ಕೈ ಮುಗಿಯುವುದಕ್ಕಿಂತ ಕಾಣುವ ದೇವರುಗಳೊಂದಿಗೆ ಬದುಕು ಸಾಗಿಸಬೇಕಿದೆ.

ಹಿಂದು-ಮುಸ್ಲಿಂ ಎಂದು ಕಚ್ಚಾಡದೆ ಪರಸ್ಪರ ಸಹೋದರರಂತೆ ಬಾಳುವುದೇ ನಿಜ ಧರ್ಮ ವಿನಃ ಜಿಹಾದ್ ಹೆಸರಿನಲ್ಲಿ ಅಮಾಯಕರ ಬಲಿ ತೆಗೆದುಕೊಳ್ಳುವುದು, ರಾಷ್ಟ್ರಭಕ್ತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವುದು ಆಗಬಾರದು. ಸಕಲ ಚರಾಚರ ವಸ್ತುಗಳಿಗೆ ಒಳಿತನ್ನೇ ಬಯಸಿದ ವಚನ ಧರ್ಮ ನಮ್ಮೆಲ್ಲರ ಧರ್ಮವಾಗಬೇಕಿದೆ.

ಅದರಂತೆ ತೀರಾ ಇತ್ತೀಚಗೆ ಪೌರತ್ವ ಕಾಯ್ದೆ ಜಾರಿ ಕುರಿತು ಪರ ವಿರೋಧದ ಘೋಷಣೆಗಳು ತಾರಕ್ಕೇರಿವೆ. ಹಿಂದೂ ಧರ್ಮದವರು ಮಾತ್ರ ಇರಬೇಕು. ಒಂದುವೇಳೆ ಇತರರು ದೇಶದಲ್ಲಿ ಇರುವುದಾದರೆ ಅದಕ್ಕೆ ಆಧಾರ ಸಾಬೀತು ಮಾಡಬೇಕು ಎಂದು ಒಂದು ಬಣದವರು ವಾದಿಸಿದರೆ, ನೀವು ಇಲ್ಲಿಯವರೇ ಎನ್ನುವುದಕ್ಕೆ ನಿಮಗೆ ಯಾವ ಆಧಾರ ಎಂದು ಪ್ರಶ್ನಿಸುತ್ತಿದ್ದಾರೆ. ಇದು ಎಷ್ಟು ಅತಿರೇಕ ಪಡೆದುಕೊಂಡಿದೆಯೆಂದರೆ ಅಮೂಲ್ಯ ಎನ್ನುವ ಹುಡುಗಿ ಜೈ ಪಾಕಿಸ್ತಾನ ಎನ್ನುವ ಮಟ್ಟಿಗೆ ಬಂದು ತಲುಪಿದೆ.

ಇದನ್ನು ಅಂದೇ ಅರಿತಂತಿರುವ ಬಸವಣ್ಣನವರು ಇವನಾರವ, ಇವನಾರವ ಎಂದು ಪರಸ್ಪರ ಧ್ವೇಷಾಸೂಯೆ ಬೆಳೆಸಿಕೊಳ್ಳದೆ ಇವ ನಮ್ಮವ, ಇವ ನಮ್ಮವ ಎಂಬ ಐಕ್ಯಭಾವ, ಪ್ರೇಮ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ದೇಶಪ್ರೇಮ, ರಾಷ್ಟ್ರಪ್ರೇಮ ಸಾಧ್ಯವಾಗಬಲ್ಲುದು ಎಂದು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here