ಕೊರೊನಾ ವಿಶ್ವವ್ಯಾಪಿ ಆವರಿಸಿಕೊಂಡು ಮನುಕುಲಕ್ಕೆಸವಾಲಾಗಿ ನಿಂತ ಸೂಕ್ಷ್ಮ ವೈರಸ್ ಇಂದಿನ ಧಾವಂತದ ಬದುಕಿಗೆ ಬ್ರೇಕ್ ಹಾಕಿದೆ. ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ನಿಯಮ ಮೀರಿ ನಾವುಗಳು ಸಹಜ ಬದುಕಿನ ಜೀವನಶೈಲಿಯಿಂದ ಮತ್ತು ಆಹಾರ ವಿಹಾರಗಳಿಂದ ದೂರವಾಗಿರುವುದರ ಫಲ ಎಂದು ಹೇಳಬಹುದು.ಪ್ರಕೃತಿಯ ಒಡಲಿನಲ್ಲಿ ಸಮೃದ್ಧವಾಗಿ ಬದುಕು ಸಾಗಿಸಿದ ನಮ್ಮ ಪೂರ್ವಜರು ಬೋಧಿಸಿದ ಶ್ರೇಷ್ಠ ಜೀವನ ಬಿಟ್ಟು ನಾಗರಿಕತೆಯ ವಾರಸುದಾರರಾದ ನಾವುಗಳು ಇಂದು ಮಾಡುತ್ತಿರುವುದು ಏನು? ಅನ್ನೋದನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಎಂದು ಹೇಳಿದರೆ ಬಹುಶಃ ತಪ್ಪಾಗಲಾರದು.
ನಿರಂತರವಾಗಿ ಕಾಡುಗಳು ಕ್ಷೀಣಿಸಿ ಹೋಗುತ್ತಿವೆ. ನದಿ ಮೂಲಗಳು ಬತ್ತಿವೆ. ಮಹಾನಗರಗಳ ವಿಸ್ತರಿಸುವ ನೆಪದಲ್ಲಿ ಕೃಷಿ ಭೂಮಿ ಲೇಔಟ್‌ಗಳಾಗಿ ಪರಿವರ್ತನೆ ಹೀಗೆ ಮನುಷ್ಯನ ದಾಹಕ್ಕೆ ಕೊನೆ ಇಲ್ಲದಂತಾಗಿದೆ. ಕೇವಲ ಹಣ ಗಳಿಕೆ ಮಾಡುವುದೇ ನಮ್ಮ ಜೀವನದ ಉದ್ದೇಶವೇ? ಇಲ್ಲಿ ನಾವು ಬಂದಿದ್ದು ಕೇವಲ ಇದಕ್ಕಾಗಿಯೇ? ಸಂಪತ್ತು ಗಳಿಸುವುದರ ಹಿಂದೆ ಬೆನ್ನು ಹತ್ತಿರುವ ನಾವುಗಳು ಮನುಷ್ಯ ಸಂಬಂಧಗಳನ್ನೇ ಮರೆತಿರುವುದನ್ನು ಎಚ್ಚರಿಸುವುದಕ್ಕಾಗಿ ಇದು ಬಂದಿದೆ ಎಂದು ಹೇಳಬಹುದು. ಆರೋಗ್ಯ ಮತ್ತು ನೆಮ್ಮದಿಯನ್ನು ಕಳೆದುಕೊಂಡಿರುವ ನಾವುಗಳು ಆಸ್ಪತ್ರೆಗೆ ಅಲೆದಾಡುವಂತೆ ಮಾಡಿದ್ದು, ಹಾಗಾದರೆ ನಾವು ಗಳಿಸಿರುವುದೇನು? ಎಂಬುದನ್ನು ಅರ್ಥ ಮಾಡಿಸಿದೆ.
ಮನೆಯೆಂದರೆ ಕೇವಲ ತಂದುದಾಣ ಅಲ್ಲ. ನಮ್ಮನ್ನೆಲ್ಲ ಬಂಧಿಸಿದ ಬೆಚ್ಚನೆಯ ಗೂಡು. ತಾಯಿಯಂತೆ ಪೊರೆವ ಕರುಣೆಯ ಕಟ್ಟಡ. ಒಲವು, ನಿಲುವಿನ ಆಗರ. ಎಲ್ಲದಕ್ಕೂ ಬಿಗ್ ಬಜಾರ್ ಗಳಿಗೆ ಓಡುತ್ತಿರುವ ನಾವು ಮನೆಯಲ್ಲೇ ಅನೇಕ ರಚಿರುಚಿಯಾದ ಅಡುಗೆ ಪದಾರ್ಥಗಳನ್ನು ತಯಾರಿಸಬಹುದು ಎಂಬುದು ಕಾರ್ಯರೂಪಕ್ಕೆ ತಂದ ಕೊರೊನಾ. ಪಾನಿಪೂರಿ, ಬೇಲ್, ಪಿಜ್ಜಾ, ಬರ್ಗರ್ ಗಳ ದಾಸರಾಗಿರುವ ನಮ್ಮ ಮಕ್ಕಳಿಗೆ ಸಜ್ಜಕ, ಪುಂಡಿಪಲ್ಯ, ಶೇಂಗಾ ಹಿಂಡಿ, ಖಡಕ್ ರೊಟ್ಟಿಎಣ್ಣೆ ಬದನೆಕಾಯಿ, ನುಚ್ಚಿನ ದರ್ಶನ ಮಾಡಿಸಿದ್ದು ಎಂದಿಗೂ ಮರೆಯಲಾಗದ ಅನುಭವ.
ಟಿವಿ, ವಾಟ್ಸ್ ಆಪ್, ಫೇಸ್ ಬುಕ್‌ಗೆ ವಿದಾಯ ಹೇಳಿ ಮನೆಯ ಮಾಳಿಗೆ ಮೇಲೆ ಏರಿ ಆಕಾಶದ ನಕ್ಷತ್ರ, ಚಂದ್ರ, ತಾರೆಯರನ್ನು ನೋಡಲು ಅವಕಾಶ ಮಾಡಿಕೊಟ್ಟಿತು. ಹೀಗೆ ಕೊರೊನಾ ಅನೇಕ ಬಗೆಯ ಪಾಠ ಕಲಿಸಿಕೊಟ್ಟಿತು ಎಂದು ಹೇಳಬಹುದು. ಕೊರೊನಾದಿಂದ ಕಲಿತ ಪಾಠ ನಮ್ಮ ಬದುಕನ್ನು ಕೈ ಹಿಡಿದು ಮುನ್ನಡೆಸುವಂತಾಗಲಿ.