ಕಲಬುರಗಿ: ನಗರದ ಕುಸನೂರು ರಸ್ತೆಯ ರಾಜಾಪುರ-ಬಡೇಪುರ ಜಿಡಿಎ ಕಾಲೋನಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಬಡಾವಣೆಯ ನಾಗರೀಕರು ಪಾಲಿಕೆ ಆಯುಕ್ತರು ಮತ್ತು ನೀರು ಸರಬರಾಜು, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಮನವಿ ಮಾಡಿ ಆಗ್ರಹಿಸಿದರು.
ಈ ವೇಳೆಯಲ್ಲಿ ಬಡಾವಣೆಯ ಡಾ. ರಾಮಕೃಷ್ಣ ಮಾತನಾಡಿ, ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಕಳೆದ ವರ್ಷದಿಂದ ಇಲಾಖೆಯ ಗಮನಕ್ಕೆ ತರಲಾಗಿದ್ದು, ನೀರು ಪುರೈಕೆಯಲ್ಲಿ ಬೇಜವಾಬ್ದಾರಿಯಿಂದ ಸಮಸ್ಯೆ ಬಿಗಡಾಯಿಸುತ್ತಿದ್ದು, ಟ್ಯಾಂಕ್‌ನಲ್ಲಿ ನೀರು ಇಲ್ಲ ಎನ್ನುತ್ತಾ, ಇಲ್ಲದ ಸಬೂಬು ಹೇಳುತ್ತಾ ದಿನ ಕಳೆಯುತ್ತಿದ್ದಾರೆ. ನೀರು ಸರಬರಾಜು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಿ, ಬೇರೆ ಸಿಬ್ಬಂದಿಗೆ ನೇಮಕ ಮಾಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದರು.
ಪದ್ಮಾ ಇಂಡಸ್ಟ್ರೀಸ್ ಹತ್ತಿರದಿಂದ ಕುಸನೂರು ಮುಖ್ಯರಸ್ತೆಯಲ್ಲಿರುವ ಪೈಪ್‌ಲೈನ್ ಮೂಲಕ ಜಿಡಿಎಗೆ ಸಂಪರ್ಕ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ, ಬಡಾವಣೆಯಲ್ಲಿ ಪ್ರತ್ಯೇಕ ನೀರಿನ ಟ್ಯಾಂಕ್ ನಿರ್ಮಿಸಬೇಕೆಂದು ತಾ.ಪಂ. ಮಾಜಿ ಸದಸ್ಯ ಸಂಜೀವ್‌ಕುಮಾರ್ ಮೌರ್ಯ ಅವರ ಮುಖಾಂತರ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ, ಸುಭಾಷ್ ಬಣಗಾರ್, ರಾಮಚಂದ್ರ ವಾದ್ರಾ, ಮಹಾಲಿಂಗಪ್ಪ ಖೇಣಿ, ದೇವಪ್ಪ ಮೇಟಿ, ಬಸವರಾಜ್, ನಾಗರಾಜ್ ಜಮಾದಾರ್, ಶ್ರೀಮಂತ ಬಡಿಗೇರ್, ಚಂದ್ರಕಾಂತ್ ಸೇರಿದಂತೆ ಮೊದಲಾದವರು ಇದ್ದರು.