ಕಲಬುರಗಿ: ಲಾಕ್ ಡೌನ್ ಉಲ್ಲಂಘಿಸಿ ಜಾತ್ರೆ ನಡೆಸಿದ ಚಿತ್ತಾಪುರ ತಾಲೂಕಿನ ರಾವೂರ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಮಠಕ್ಕೆ ಶನಿವಾರ ಜಿಲ್ಲಾಧಿಕಾರಿ ಶರತ್ ಬಿ. ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ವಿವಿಧ ಪ್ರದೇಶಗಳಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಅನುಷ್ಠಾನವನ್ನು ಪರಾಮರ್ಶಿಸಿದರು. ಕೊರೋನಾ ಸೋಂಕು ಹರಡದಂತೆ ಮುನ್ನೆಚರಿಕೆಯಾಗಿ ಗ್ರಾಮದೊಳಗಿನ ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸ್ಥಳದಲ್ಲಿದ್ದ ಚಿತ್ತಾಪುರ ತಹಶೀಲ್ದಾರ ಉಮಾಕಾಂತ ಅವರು ಡಿ.ಸಿ. ಅವರ ಗಮನಕ್ಕೆ ತಂದರು.
ರಾವೂರು ಜಾತ್ರೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಸ್ಥಾನದ 20 ಜನ ಮತ್ತು ಸುಮಾರು 150-200 ಜನ ಗ್ರಾಮಸ್ಥರ ವಿರುದ್ಧ ವಾಡಿ ಠಾಣೆಯಲ್ಲಿ ಈಗಾಗಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ವಾಡಿ ಪಟ್ಟಣಕ್ಕೂ ಭೇಟಿ: ಪಟ್ಟಣದ ಎ.ಸಿ.ಸಿ. ಕಂಪನಿ ಗೇಟ್ ಬಳಿ ಪಿಲ್ಕಂ ಪ್ರದೇಶದ 2 ವರ್ಷದ ಗಂಡು ಮಗುವಿಗೆ ಕಳೆದ ಏಪ್ರಿಲ್ 12 ರಂದು ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಕಂಟೇನ್ ಮೆಂಟ್ ಝೋನ್ ಎಂದು ಗುರುತಿಸಿದ ವಾರ್ಡ ಸಂಖ್ಯೆ 11, 12, 13 ಹಾಗೂ 14 ಪ್ರದೇಶಕ್ಕೂ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಪೂರ್ವಸಿದ್ಧತೆಯನ್ನು ಜಿಲ್ಲಾಧಿಕಾರಿ ಶರತ್ ಬಿ. ಅವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಚಿತ್ತಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಕೆ., ಚಿತಾಪುರ್ ಸಿಪಿಐ ಪಂಚಾಕ್ಷರಿ ಸಾಲಿಮಠ, ವಾಡಿ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಇನ್ನಿತರ ಅಧಿಕಾರಿಗಳು ಇದ್ದರು.