ಸುರಪುರ: ಶನಿವಾರ ಸಂಜೆ ಏಳು ಗಂಟೆಯ ನಂತರ ಸುರಿದ ಗುಡುಗು ಮಿಂಚು ಹಾಗು ಸಿಡಿಲು ಭರಿತ ಮಳೆಗೆ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ತಾಲೂಕಿನ ಬಿಜಾಸ್ಪುರ ಗ್ರಾಮದ ರೈತ ದುರ್ಗಪ್ಪ ಎಂಬುವವರು ಎರಡು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಮಳೆ ಗಾಳಿಗೆ ಸಿಕ್ಕು ಬಹುತೇಕ ಪಪ್ಪಾಯಿ ಗಿಡಗಳು ನೆಮಕ್ಕುರಳಿ ರೈತನಿಗೆ ಲಕ್ಷಾಂತರ ರೂಪಾಯಿ ಹಾನಿ ಮಾಡಿದೆ.
ಚಂದ್ಲಾಪುರ ಗ್ರಾಮದ ಬಳಿಯಲ್ಲಿ ಐದು ಎಕರೆಯಲ್ಲಿ ರೈತ ಜಗದೀಶ ನಂಬಾ ಎನ್ನುವವರು ಬೆಳೆದ ಪಪ್ಪಾಯಿ ಗಿಡಗಳು ನೆಲಕ್ಕುರಳಿ ಇಲ್ಲಿಯೂ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.ಅಲ್ಲದೆ ತಾಲೂಕಿನ ಹೆಮನೂರ ಗ್ರಾಮದ ರೈತ ಬಸನಗೌಡ ಪೊಲೀಸ್ ಪಾಟೀಲ ಎನ್ನುವವರು ತಮ್ಮ ನಲವತ್ತು ಎಕರೆ ಜಮೀನಲ್ಲಿ ಭತ್ತ ಬೆಳೆದಿದ್ದು ಕಟಾವಿಗೆ ಬಂದಿತ್ತು.ಅಕಾಲಿಕವಾಗಿ ಸುರಿದ ಮಳೆ ಗಾಳಿಗೆ ಸಿಕ್ಕ ಭತ್ತದ ಬೆಳೆ ಸಂಪೂರ್ಣ ನೆಲಕ್ಕುರಳಿ ಭತ್ತ ಮಳೆಯ ನೀರಲ್ಲಿ ನೆನೆಯುತ್ತಿದೆ.ಇದನ್ನು ಕಂಡ ರೈತ ಬಸನಗೌಡ ಸುಮಾರು ಹತ್ತು ಲಕ್ಷ ರುಪಾಯಿ ವರೆಗೆ ಸಾಲ ಮಾಡಿ ಭತ್ತ ಬೆಳೆದಿದ್ದೆ ಇನ್ನೇನು ಕಟಾವು ಮಾಡಬೇಕೆಂದಿರುವಾಗ ಮಳೆ ಬಿದ್ದು ಎಲ್ಲಾ ನಷ್ಟವಾಗಿದೆ,ಸರಕಾರ ಸಹಾಯ ಮಾಡಿದರೆ ಬದುಕುತ್ತೇವೆ,ಇಲ್ಲವಾದರೆ ನಮಗೆ ಸಾವೆ ಗತಿಯಾಗಲಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ನಗರದ ಹಸನಾಪುರದ ರೈತ ಹಣಮಂತ್ರಾಯಗೌಡ ಎಂಬುವವರು ತಮ್ಮ ಹೊಲದಲ್ಲಿ ಎತ್ತುಗಳನ್ನು ಕಟ್ಟಿಹಾಕಿದ್ದು ರಾತ್ರಿ ಬಿದ್ದ ಸಿಡಿಲಿಗೆ ಒಂದು ಎತ್ತು ಸಾವಿಗೀಡಾಗಿದೆ,ಮುರು ಎತ್ತುಗಳನ್ನು ಕಟ್ಟಿಹಾಕಿದ್ದು ಒಂದು ಸತ್ತಿದೆ ಇನ್ನೆರಡು ಎತ್ತುಗಳಿಗೆ ಗಾಯಗಳಾಗಿವೆ,ನಮ್ಮ ಕುಟುಂಬದ ಬದುಕಿನ ಆಸರೆಯಾಗಿದ್ದ ಎತ್ತು ಸತ್ತಿದ್ದರಿಂದ ನಮ್ಮ ಬದುಕೆ ಕಷ್ಟಕ್ಕೆ ದೂಡಿದಂತಾಗಿದೆ ಸರಕಾರ ನೆರವಾಗಬೇಕೆಂದು ಗೋಳಿಡುತ್ತಿದ್ದಾರೆ.
ಅದೇರಿತಿಯಾಗಿ ತಾಲೂಕಿನ ಚಂದ್ಲಾಪುರ ಗ್ರಾಮದ ಬಳಿಯ ಹೊಲದಲ್ಲಿನ ಹುಲ್ಲಿನ ಬಣವೆಗೆ ಸಿಡಿಲು ಬಡಿದು ಹುಲ್ಲಿನ ಬಣವೆ ಸುಟ್ಟು ಕರಕಲಾಗಿದೆ.ಬಣವೆಯ ಮಾಲೀಕ ಖಲೀಲ ಅಹ್ಮದ ದಖನಿ ತಮ್ಮ ಅಳಲನ್ನು ತೋಡಿಕೊಂಡು ಜಾನುವಾರುಗಳಿಗೆ ಮೇಯಿಸಲು ಮೇವು ಸಂಗ್ರಹಿಸಲಾಗಿತ್ತು.ಈಗ ಸಿಡಿಲಿನಿಂದ ಎಲ್ಲಾ ಮೇವು ಭಸ್ಮವಾಗಿದೆ ಪಶುಸಂಗೋಪನಾ ಇಲಾಖೆ ಮೇವು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.