ಕಲಬುರಗಿ: ಭಾರತೀಯ ಅಂಚೆ ಇಲಾಖೆಯು ಇತ್ತೀಚೆಗೆ “ಅಂಚೆ ಮಿತ್ರ” ಎಂಬ ವೆಬ್ ಅಪ್ಲಿಕೇಶನ್‍ನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಬಾರದೇ ಮನೆಯಲ್ಲಿಯೇ ಕುಳಿತು ಈ ವೆಬ್ ಅಪ್ಲಿಕೇಶನ್‍ದಲ್ಲಿ ರಿಕ್ವೆಸ್ಟ್ ಕಳುಹಿಸುವ ಮೂಲಕ ಕೆಳಕಂಡ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರಾದ ಬಿ.ಆರ್. ನನಜಗಿ ಅವರು ತಿಳಿಸಿದ್ದಾರೆ.
ಸಾರ್ವಜನಿಕರು www.karnatakapost.gov.in ವೆಬ್‍ಸೈಟ್‍ದಲ್ಲಿನ ಅಂಚೆಮಿತ್ರ ಲಿಂಕ್‍ನಿಂದ (ವೆಬ್ ಅಪ್ಲಿಕೇಶನ್‍ದಿಂದ) ರೆಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಮೆಡಿಕಲ್ ಪಾರ್ಸೆಲ್ ಕಳುಹಿಸಲು ಹಾಗೂ ಪೋಸ್ ಆಫೀಸಿನ ಅಕೌಂಟ್‍ನಲ್ಲಿರುವ ಹಣ ಪಡೆಯಲು, ಪೋಸ್ಟಲ್ ಲೈಫ್ ಇನ್ಸುರೆನ್ಸ್ ಮತ್ತು ರೂರಲ್ ಪೋಸ್ಟಲ್ ಲೈನ್ ಇನ್ಸುರೆನ್ಸ್ ಪ್ರಿಮಿಯಂ ಪಾವತಿಸಲು ಹಾಗೂ ಮನಿ ಆರ್ಡರ್ ಕಳುಹಿಸಲು ರಿಕ್ವೆಸ್ಟ್ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ವೆಬ್ ಅಪ್ಲಿಕೇಶನ್‍ದಲ್ಲಿ ತಮ್ಮ ಸರ್ವೀಸ್ ರಿಕ್ವೆಸ್ಟ್ ಮಾಡುವಾಗ ತಮ್ಮ ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಮಾಹಿತಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ನಂತರ ಅಂಚೆ ಅಣ್ಣ ಅಥವಾ ಸಿಬ್ಬಂದಿಗಳು ತಮ್ಮ ಮನೆ ಬಾಗಿಲಿಗೆ ಬಂದು ತಾವು ರಿಕ್ವೆಸ್ಟ್ ಮಾಡಿಸುವ ಸೌಲಭ್ಯಗಳನ್ನು ಒದಗಿಸುತ್ತಾರೆ. ಈ ಸರ್ವಿಸ್ ಪಡೆಯಲು ಯಾವುದೇ ಹೆಚ್ಚುವರಿ ಹಣ ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.