ಕನ್ನಡ ಅಸ್ಮಿತೆ ಹಾಗೂ ವಚನ ಪ್ರಚಾರದ ದಂಡನಾಯಕ: ಡಾ. ಚನ್ನಬಸವ ಪಟ್ಟದ್ದೇವರು

0
76

ಜಗತ್ತಿನ ಪ್ರಥಮ ಸಮಾಜವಾದಿ ಚಿಂತಕ, ಕಾಯಕ ಚಳುವಳಿ ಮೂಲಕ ಕಾರ್ಮಿಕ ಸಮೂಹವನ್ನು ಒಗ್ಗೂಡಿಸಿದ ನಾಯಕ, ಸಮಾನತೆ ಪರಿಕಲ್ಪನೆಯ ಹರಿಕಾರ ವಿಶ್ವ ಗುರು ಬಸವಣ್ಣ ಎಂದು ನಾವೆಲ್ಲರೂ ಕರೆಯುತ್ತೇವೆ. ಹೌದು, ರಾಜ್ಯಶಕ್ತಿಗಳ ಅಟ್ಟಹಾಸದಿಂದ ತಳವರ್ಗ ಸಮುದಾಯಗಳ ಬದುಕು ದುರ್ಬರವಾಗಿತ್ತು. ಅಂತಹ ವಿಷಮ ಕಾಲಘಟ್ಟದಲ್ಲಿ: ಜನಿಸಿದ ಬಸವಣ್ಣ ಶೋಷಿತರ ದನಿಯಾಗಿ ಸಮಾಜೋಧಾರ್ಮಿಕ ಸುಧಾರಣೆಗೆ ನಾಂದಿಹಾಡಿದರು. ಅದು 12ನೇ ಶತಮಾನದ ಕಾಲ, ಬಸವಣ್ಣ ಹಾಗೂ ಸಮಕಾಲೀನ ಶರಣ ಸಂಕುಲ ಒಗ್ಗೂಡಿ ಕೈಗೊಂಡಿರುವ ಸಾಮಾಜಿಕ ಚಳುವಳಿಗೆ ನಾವು ಬಸವ ಯುಗ, ಬಸವ ಚಳುವಳಿ ಎಂದು ಕರೆಯುತ್ತೇವೆ.

ಬಸವಾದಿ ಶರಣರ ತತ್ವಾದರ್ಶಗಳನ್ನು ಎಂಟು ನೂರ ವರ್ಷಗಳ ನಂತರ ಬದುಕಿನಲ್ಲಿ ಮೈಗೂಡಿಸಿಕೊಂಡು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಬಸವ ಚಿಂತನೆಯನ್ನು ಜನಮಾನಸದಲ್ಲಿ ಬಿತ್ತಿದ ಒಬ್ಬ ಸಂತ ಎಂದರೆ ನೆನಪಿಗೆ ಬರುವುದು ಭಾಲ್ಕಿಯ ಡಾ.ಚನ್ನಬಸವ ಪಟ್ಟದ್ದೇವರು.

Contact Your\'s Advertisement; 9902492681

ಚನ್ನಬಸವ ಪಟ್ಟದ್ದೇವರ ಹುಟ್ಟೂರು ಬೀದರ ಜಿಲ್ಲೆಯ ಔರಾದ ತಾಲೂಕಿನ (ಈಗ ತಾಲೂಕು ಆಗಿದೆ) ಕಮಲನಗರ. ಶರಣ ರಾಚಪ್ಪ ಹಾಗೂ ಸಂಗಮ್ಮ ದಂಪತಿಗಳ ಸುಪುತ್ರರಾಗಿ 1890 ಡಿಸೆಂಬರ್ 22ರಂದು ಜನಿಸಿದರು. ಬಾಲ್ಯದಲ್ಲಿಯೇ ಪೋಷಕರನ್ನು ಕಳೆದುಕೊಂಡ ಚನ್ನಬಸವ ಶ್ರೀಗಳಿಗೆ ಸಮಾಜವೇ ಕುಟುಂಬವಾಗಿ ಆಧಾರವಾಗಿತ್ತು. ಚಿಕ್ಕಂದಿನಲ್ಲೇ ಆಧ್ಯಾತ್ಮಿಕ ಒಲವು ಹೊಂದಿದ್ದ ಶ್ರೀಗಳಿಗೆ ಭಾಲ್ಕಿಯ ಹಿರೇಮಠ ಸಂಸ್ಥಾನ ಅಕ್ಷರ ದಾಸೋಹಕ್ಕೆ ಆಸರೆಯಾಗಿ ಬೆಳಗಿತು.

ಓದು -ಬರಹ ಜೊತೆಗೆ ಬಸವಾದಿ ಶರಣರ ವಚನ ಸಾಹಿತ್ಯ ಅಧ್ಯಯನದ ಗೀಳು ಹೊಸ ಚಿಂತನೆಗಳಿಗೆ ಹಚ್ಚಿತ್ತು. ಚನ್ನಬಸವರು ವಚನ ಸಾಹಿತ್ಯದ ಪ್ರಭಾವಕ್ಕೆ ಒಳಗಾದರು. ವಚನ ಚಿಂತನೆಯ ಗಾಢವಾದ ಸೆಳೆತ ಶ್ರೀಗಳಿಗೆ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ವೈಜ್ಞಾನಿಕ ಚಿಂತನೆ ಕಡೆಗೆ ಕರೆದೋಯ್ಯುವಂತೆ ಮಾಡಿತ್ತು. ಚನ್ನಬಸವರ ಕ್ರಿಯಾಶೀಲ ಚಟುವಟಿಕೆ, ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಜ್ಞಾನದ ಫಲವಾಗಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಯಾಗಿ ನೇಮಕವಾದರು.

ಚನ್ನಬಸವರು ಕಾಯಕ ದಾಸೋಹ ಹಾಗೂ ಜಂಗಮ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದರು. ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಅಜ್ಞಾನ ಹೊಡೆದೋಡಿಸಲು ವಚನ ಸಾಹಿತ್ಯ ದಿವ್ಯ ಅಸ್ತ್ರವಾಗಿ ಬಳಸಲು ಪ್ರಯತ್ನಿಸಿ ಜ್ಞಾನದ ಅರಿವು ಬೆಳಗಿದರು. ಚನ್ನಬಸವ ಶ್ರೀಗಳು *”ಹಳ್ಳಿಗಳಿಗೆ ಏಕ ರಾತ್ರಿ ಪಟ್ಟಣಗಳಿಗೆ ಪಂಚ ರಾತ್ರಿ”* ಎನ್ನುವ ತತ್ವವನ್ನು ಮೈಗೂಡಿಸಿಕೊಂಡು ಸಮಾಜದ ಮನೆ – ಮನೆಗಳಿಗೂ ವಚನ ಸಾಹಿತ್ಯ ಮುಟ್ಟಿಸುವ ಮಹೋನ್ನತ ಕಾರ್ಯ ಮಾಡಿದ್ದಾರೆ. ಹಾಗಾಗಿಯೇ ಶ್ರೀಗಳಿಗೆ ‘ನಡೆದಾಡುವ ದೇವರು’ ಎಂದು ಕರೆಯುತ್ತಿದ್ದರು.

ಅಜ್ಞಾನ, ಅಸ್ಪ್ರಶ್ಯತೆ, ಮೌಢ್ಯ, ಜಾತಿಯತೆ, ಅಸಮಾನತೆಗಳಿಂದ ಜಿಡ್ಡುಗಟ್ಪಿರುವ ಸಮಾಜವನ್ನು ಸಮ ಸಮಾಜವಾಗಿ ರೂಪಿಸುವ ನಿಟ್ಟಿನಲ್ಲಿ ‘ಇವನಾರವ ಎನ್ನದೇ ಇವನಮ್ಮವ’ ತತ್ವ ಅಳವಡಿಸಿಕೊಳ್ಳವಂತೆ ಎಲ್ಲರನ್ನೂ ಬೋಧಿಸಿದರು. ಜಾತಿ ವರ್ಗ ವರ್ಣ ಭೇದಗಳ ಜಾಡ್ಯದಿಂದ ಹೊರಬಂದು ಶರಣರು ಬಯಸಿದ ಸೌಹಾರ್ದಯತೆ ಸಮಾಜ ಕಟ್ಟಲು ಸಿದ್ಧರಾಗಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಮುಖಾಂತರ ವಿಶ್ವಮಾನವ ಸಂದೇಶ ಸಾರಿದರು.

ಚನ್ನಬಸವ ಪಟ್ಟದ್ದೇವರ ಎರಡು ಮಹತ್ವದ ಕಾರ್ಯಕ್ರಮಗಳು ನೆನಪಿಸಿಕೊಳ್ಳಬೇಕಿದೆ. ಒಂದು ಕನ್ನಡ ಉಳಿವು ಹಾಗೂ ವಚನ ಸಾಹಿತ್ಯದ ಅರಿವು. ನಿಜಾಂ ಆಳ್ವಿಕೆಗೆ ಒಳಪಟ್ಟ ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲಿ ಉರ್ದು ಪ್ರಭಾವ ತೀವ್ರವಾಗಿತ್ತು. ಕನ್ನಡ ಕಲಿಯಲು ಅವಕಾಶ ಇರದ ಸಂದರ್ಭದಲ್ಲಿ *’ಒಳಗೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸಿದ’* ಶ್ರೇಯಸ್ಸು ಭಾಲ್ಕಿಯ ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಶ್ರೀಗಳಿಗೆ ಕನ್ನಡ ನಾಡು ನುಡಿ ಜನ ಭಾಷೆಯ ಮೇಲೆ ಅದೆಷ್ಟು ಅಭಿಮಾನ ಹಾಗೂ ಕಾಳಜಿ ಇತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಕನ್ನಡ ನೆಲ ಭಾಷೆ ಸಾಹಿತ್ಯ , ಕರ್ನಾಟಕ ಏಕೀಕರಣ ಸೇರಿದಂತೆ ಅನೇಕ ಹೋರಾಟದಲ್ಲಿ ಶ್ರೀಗಳು ಸಕ್ರೀಯವಾಗಿ ಭಾಗವಹಿಸಿ ಕನ್ನಡ ಉಳಿವಿಗಾಗಿ ಶ್ರಮಿಸಿದರು.

ಬಸವಾದಿ ಶರಣರು ಬಯಸಿದ ಸಮ ಸಮಾಜ ಪರಿಕಲ್ಪನೆಯ ಸಮಾಜವನ್ನು ಚನ್ನಬಸವ ಪಟ್ಟದ್ದೇವರು ಮುಂದುವರಿಸಿದರು ಎಂದು ಹೇಳಿದರು ತಪ್ಪಾಗಲಾರದು. ವೈಜ್ಞಾನಿಕ, ವೈಚಾರಿಕ ಪ್ರಜ್ಞೆ ಮೂಡಿಸುವ ಶರಣ ಸಿದ್ಧಾಂತದಿಂದ ಮಾತ್ರ ಈ ಸಮಾಜ ಬದಲಾವಣೆ ಮಾಡಬಹುದು ಎಂಬ ಬಲವಾದ ಕಾರಣಕ್ಕೆ ಕರ್ನಾಟಕ , ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ವಚನ ಸಾಹಿತ್ಯ ಪ್ರಚುರಪಡಿಸಲು ಮುಂದಾಗಿದರು. ಎಲ್ಲರನ್ನೂ ಅಪ್ಪ ಬೊಪ್ಪ ಎಂದು ಕರೆಯುವ ಮೂಲಕ ‘ಇವನಮ್ಮವ’ ಎನ್ನುವ ಸೌಹಾರ್ದತೆ ಭಾವ ಶ್ರೀಗಳು ಮೈಗೂಡಿಸಿಕೊಂಡಿದರು.

ಅಂದಿನ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಶೈಕ್ಷಣಿಕ ಪ್ರಜ್ಞೆ ಇರಲಿಲ್ಲ. ಶಿಕ್ಷಣ ಕಲಿಯಲು ಶಾಲಾ ಕಾಲೇಜುಗಳ ಸೌಲಭ್ಯ ಕೂಡ ಇರಲಿಲ್ಲ. ಪ್ರಜ್ಞಾವಂತ ಸಮಾಜ ರೂಪಿಸಲು ಸ್ತ್ರೀಯರ ಪಾತ್ರ ಪ್ರಮುಖವಾದದ್ದು. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಜೊತೆಗೆ ಸಾಮಾಜಿಕವಾಗಿ ಮಹಿಳೆಯರ ಶ್ರೇಯಸ್ಸಿಗೆ ಶೈಕ್ಷಣಿಕ ಮನೋಭಾವ ತೀರ ಅವಶ್ಯ ಎಂದು ಮನಗಂಡ ಶ್ರೀಗಳು ಪ್ರತ್ಯೇಕ ಮಹಿಳಾ ಕಾಲೇಜು ಸ್ಥಾಪಿಸಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಜೊತೆಗೆ ಸ್ತ್ರೀ ಸಮಾನತೆಗಾಗಿ ಚಿಂತನೆ ನಡೆಸಿರುವ ಚನ್ನಬಸವರು ಮಹಿಳೆಯರ ಶಿಕ್ಷಣ, ಹಕ್ಕು, ಸಮಾನತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡಿದರು.

ಬಡವರ, ಶ್ರಮಿಕರ, ದೀನರು ಎದುರಿಸುವ ಅನೇಕ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸವಾಲುಗಳಿಗೆ
ಶ್ರೀಗಳು ವಿವಿಧ ಮಾರ್ಗಗಳು ಕಂಡುಕೊಂಡರು. ಜಾತಿವ್ಯವಸ್ಥೆಯ ನಿರ್ನಾಮಕ್ಕಾಗಿ ಅನೇಕ ಅಂತರ್ಜಾತಿ ವಿವಾಹಗಳನ್ನು ಕೈಗೊಂಡಿದರು. ಜಾತಿ ವರ್ಗ ವರ್ಣ ಲಿಂಗ ಭೇಧ ಎನ್ನದೇ ಎಲ್ಲಾ ವರ್ಗದ ಕಾಯಕ ಜನರಿಗೂ ಒಗ್ಗೂಡಿಸುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ‘ನೂತನ ಅನುಭವ ಮಂಟಪ’ ಕಟ್ಟಿದರು. ಭಾಲ್ಕಿಯ ಹಿರೇಮಠದ ಕಾರ್ಯಕ್ರಮಗಳು ಬದಿಗೊತ್ತಿ ಸ್ವಂತ ಕಲ್ಲು ಮಣ್ಣು ಹೊತ್ತು ಅನುಭವ ಮಂಟಪ’ ನಿರ್ಮಾಣ ಮಾಡಿರುವ ಚನ್ನಬಸವರು ಬಸವಣ್ಣನವರ ಕಾರ್ಯಕ್ಕೆ ಮತ್ತೊಮ್ಮೆ ಮುನ್ನುಡಿ ಬರೆದ ಇಪ್ಪತ್ತನೇ ಶತಮಾನದ ನಿಜ ಶರಣ – ಜಂಗಮ ಎಂದರೆ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು.

ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಚನ್ನಬಸವ ಶ್ರೀಗಳು ಅನಾಥ ಬಡ ಮಕ್ಕಳ ಬದುಕಿಗೆ ಆಸರೆಯಾಗಿ ಬೆಳಕಾದವರು. ಹಿರೇಮಠ ಸಂಸ್ಥಾನ ಭಾಲ್ಕಿಯಲ್ಲಿ ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಅಸಂಖ್ಯಾತ ಕಡು ಬಡವ ಅನಾಥ ಮಕ್ಕಳಿಗೆ ಜ್ಞಾನ ದಾಸೋಹ ಗೈದಿದ್ದಾರೆ. ಅನ್ನ ದಾಸೋಹ, ಅಕ್ಷರ ದಾಸೋಹ ಸೇರಿದಂತೆ ವಚನ ದಾಸೋಹ ಮೂಲಕ ಕಾಯಕ ಸಂತ ಎನಿಸಿಕೊಂಡಿದವರು.

ಇಂದು ಎಪ್ರಿಲ್ 22, ಡಾ.ಚನ್ನಬಸವ ಪಟ್ಟದ್ದೇವರ 21ನೇ ಸ್ಮರಣೋತ್ಸವ ದಿನ. ಶ್ರೀಗಳು ತಮ್ಮ ಬದುಕಿನ109 ವರ್ಷಗಳ ಸುದೀರ್ಘ ಕಾಲದವರೆಗೂ ಕನ್ನಡ ನಾಡು, ನುಡಿ, ಸಂಸ್ಕೃತಿ, ವಚನ ಸಾಹಿತ್ಯ, ಶಿಕ್ಷಣ ಸೇರಿದಂತೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ಸಮರ್ಥವಾಗಿ ನಿರ್ವಹಿಸಿದರು. ಸನ್ಯಾಸ ಸ್ವೀಕರಿಸಿದ ಮೇಲೆ ರಕ್ತ ಸಂಬಂಧಗಿಂತ ಭಕ್ತ ಸಂಬಂಧವೇ ಮುಖ್ಯವಾಗುತ್ತದೆ. ಶ್ರೀಗಳು ಒಂದು ಮಠದ ಮಠಾಧಿಪತಿಯಾಗಿ ಸಮಾಜೋಧಾರ್ಮಿಕ ಸುಧಾರಣೆಗೆ ಹೇಗೆ ದುಡಿಯಬೇಕು, ಬಸವಾದಿ ಶರಣರ ಮೂಲ ಚಿಂತನೆಗಳಿಗೆ ಒಳಗೊಂಡು ಸಮಾಜಕ್ಕೆ ಹೇಗೆ ಅರ್ಪಿಸಬೇಕು ಎಂದು ಆಳವಾಗಿ ಯೋಚಿಸಿ ಸೂಕ್ತ ಮಾರ್ಗಗಳನ್ನು ಕಂಡುಕೊಂಡಿದರು. ಶ್ರೀಗಳು ಕೈಗೊಂಡಿರುವ ಯೋಜಿತ ಬಹುಮುಖಿ ಕಾರ್ಯಕ್ರಮಗಳು ಇಂದು ನಮ್ಮೆಲ್ಲರ ಕಣ್ಣೆದುರಿವೆ.

ಇಂದಿಗೂ ಡಾ.ಚನ್ನಬಸವ ಪಟ್ಟದ್ದೇವರ ಮಹೋನ್ನತ ಕಾರ್ಯವನ್ನು ಮೆಚ್ಚಿಕೊಂಡು ಬದುಕುವ ಅಸಂಖ್ಯಾತ ಶರಣ ಸಂಕುಲ ಕರ್ನಾಟಕ ಆಂಧ್ರಪ್ರದೇಶ ಮಹಾರಾಷ್ಟ್ರ ತೆಲಂಗಾಣ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇದ್ದಾರೆ. ಇಂದಿಗೂ ಭಾಲ್ಕಿ ಹಿರೇಮಠವನ್ನು ‘ಕನ್ನಡದ ಮಠ’ ಎಂದೇ ಕರೆಯುತ್ತಾರೆ. ಇದಕ್ಕೆಲ್ಲವೂ ಕಾರಣೀಭೂತರಾದ ಚನ್ನಬಸವ ಪಟ್ಟದ್ದೇವರು ಎಂದು ಹೇಳಬಹುದು. ಈ ಭಾಗದಲ್ಲಿ ಕನ್ನಡ ಸೇವೆ, ವಚನ ಸಾಹಿತ್ಯ ಬೆಳಗಿದ ಕೀರ್ತಿ ಪೂಜ್ಯ ಚನ್ನಬಸವರದ್ದು. ಹಾಗಾಗಿಯೇ ಕನ್ನಡದ ಪಟ್ಟದೇವರೆಂದು ಪ್ರಖ್ಯಾತರಾಗಿ ಲಕ್ಷಾಂತರ ಜನಮಾನಸದ ಹೃದಯದಲ್ಲಿ ಉಸಿರಾಡುತ್ತಿದ್ದಾರೆ.

ತ್ರಿವಿಧ ದಾಸೋಹ ಮೂಲಕ ಅನೇಕ ಕಡುಬಡವರ, ದೀನರ , ಅನಾಥರ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಬಸವಾದಿ ಶರಣರ ತತ್ವಾದರ್ಶ ಚಿಂತನೆಯ ನಿಲುವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿರುವ ರಾಜ್ಯದ ಕೆಲವೇ ಮಠಗಳಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನ ಕೂಡ ಒಳಗೊಳ್ಳುತ್ತದೆ ಎಂದು ಹೇಳಬಹುದು. ಇಂತಹ ಅನನ್ಯ ಜ್ಞಾನದ ಕಾಯಕ ಪ್ರೇಮಿಗಳು ನಮ್ಮ ನಾಡಿನಲ್ಲಿ ಹುಟ್ಟಿ ‌ನಾಡು ನುಡಿಯನ್ನು ಬೆಳಗಿದ್ದು ನಮ್ಮೆಲ್ಲರ ಸೌಭಾಗ್ಯ ಎನ್ನಬಹುದು.


*ಶರಣು ಶರಣಾರ್ಥಿ.‌‌‌..*
– *ಬಾಲಾಜಿ ಕುಂಬಾರ, ಚಟ್ನಾಳ*

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here