ಕೊರೊನಾ ಕಲಿಸಿದ ಪಾಠ: ಲಾಕ್ಡೌನ್ನಲ್ಲಿ ನೆನಪಾದ ಅವ್ವ ಮತ್ತು ಅಜ್ಜ

0
207

ಪ್ರಸ್ತುತ ಜಗತ್ತಿನ ಪರಿಸ್ಥಿತಿ ಎಲ್ಲರಿಗೂ ತಿಳಿದೇ ಇದೆ. ಕೊರೊನಾ ವೈರಸ್ನಿಂದಾಗಿ ಪ್ರಪಂಚದಾದ್ಯಂತ ತಲ್ಲಣ. ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತ, ಜೀವನ ಮೌಲ್ಯ ಮತ್ತು ಬದುಕಿನ ಸತ್ಯ ಮತ್ತೊಮ್ಮೆ ತಿಳಿಸಿ ಕೊಟ್ಟ ವೈರಾಣು. ಮನುಷ್ಯ ಕಲಿತ ಪಾಠಗಳ ಕುರಿತು ಅನೇಕ ವಾಟ್ಸ್ಆಪ್ ಸಂದೇಶ, ವಿಡಿಯೊಗಳು ವೈರಲ್ ಆಗಿರುವುದನ್ನು ನಾವೆಲ್ಲರೂ ನೋಡುತ್ತಲೇ ಬಂದಿದ್ದೇವೆ. ‘ಹಣ’ ಮತ್ತು ‘ಪ್ರಾಣ’ದ ಬೆಲೆಯನ್ನು ಕಲಿಸಿ ಕೊಟ್ಟ ಸಂದರ್ಭವಿದು. ಮನುಷ್ಯ ಮನುಷ್ಯರ ನಡುವಿನ ಸಂಬಂಧ ಅರಿಯಲು ಸಕಾಲ.

ಹಿಂದೆ ನಮ್ಮ ಹಿರಿಯರು ಬದುಕು ನಡೆಸಿದ ರೀತಿಯನ್ನು ಮರೆಯುವಷ್ಟು ಇಂದು ನಾವು ಮುಂದುವರಿದಿದ್ದೇವೆ. ನಮ್ಮ ಭಾರತ ದೇಶದ ಸಂಸ್ಕೃತಿ, ಪರಂಪರೆ ಎಂದು ವೈಭವೀಕರಿಸಿಕೊಂಡು ಹೇಳುವ ಮಟ್ಟಿಗೆ ಉಳಿಸಿಕೊಂಡು ಬಂದಿದ್ದು ದುರದೃಷ್ಟಕರ.

Contact Your\'s Advertisement; 9902492681

ಹಳೆಯ ಪದ್ಧತಿಗಳು ಇಂದಿನ ದಿನಗಳಲ್ಲಿ ಹೊಸತನದಿಂದ ಮತ್ತೆ ಹೊರ ಬಂದು ಅಳವಡಿಸಿಕೊಳ್ಳುವಂತೆ ಮಾಡಿದೆ. ಇಂಥ ಸಂದರ್ಭದಲ್ಲಿ ಅಜ್ಜ ಮತ್ತು ಅವ್ವ ನೆನಪಾಗುತ್ತಿದ್ದಾರೆ.

ನನ್ನ ಅಪ್ಪನ ತಂದೆ ‘ಗಳಂಗಳಪ್ಪ ಸಿದ್ದಬಟ್ಟೆ’. ಅಗ ಅಜ್ಜ ಬಿಳಿ ಧೋತ್ರ, ಬಿಳಿ ಅಂಗಿ, ಗುಲಾಬಿ ಮುಂಡಾಸು ಕಟ್ಟಿಕೊಳ್ಳುತ್ತಿದ್ದರು. ಇದು ಸುಮಾರು 1975 ರಲ್ಲಿ ನಡೆದ ಸಂಗತಿ. ಅಪ್ಪ, ಅವ್ವ, ತಮ್ಮನೊಂದಿಗೆ ಮೈಸೂರಿನಲ್ಲಿ ನೆಲೆಸಿದ ಸಮಯ. ನಮ್ಮ ಅಜ್ಜ ನಮ್ಮನ್ನು ನೋಡಲು ಮೈಸೂರಿಗೆ ಬರುವವರಿದ್ದರು. ಆಗ ನೇರವಾದ ರೈಲಾಗಲಿ, ಬಸ್ಸಾಗಲಿ ಇರಲಿಲ್ಲ. ಮಧ್ಯೆ ಮಧ್ಯೆ ಬದಲಿಸಿ ಬರಬೇಕಾಗುತ್ತಿತ್ತು.

ಅಜ್ಜನ ಊರು ಬೀದರ ಜಿಲ್ಲೆಯ, ಔರಾದ ತಾಲೂಕು. ನಾವಿದ್ದದ್ದು ಮೈಸೂರು. ಕರ್ನಾಟಕದ ನಕಾಶೆ ತೆರೆದು ನೋಡಿದರೆ ತುತ್ತ ತುದಿಯಲ್ಲಿ ಔರಾದ ಇದ್ದರೆ, ಪೂರ್ತಿ ಕೆಳಗೆ ಮೈಸೂರು ಜಿಲ್ಲೆ. ಅಜ್ಜ ಔರಾದಿನಿಂದ ಬಟ್ಟೆ ಬರೆ, ರೊಟ್ಟಿ ಬುತ್ತಿ ಕಟ್ಟಿಕೊಂಡು ಮೈಸೂರಿಗೆ ಹೊರಟರು. ಬಸ್ ಮೂಲಕ ಬೀದರ ತಲುಪಿದರು. ಅಲ್ಲಿಂದ ಇನ್ನೊಂದು ಬಸ್ನಲ್ಲಿ ಕಲಬುರಗಿ ಸೇರಿದರು.

ಕಲಬುರಗಿಯಿಂದ ಗುಂತಕಲ್ ರೈಲು ಹತ್ತಿದರು. ಗುಂತಕಲ್ನಿಂದ ಬೆಂಗಳೂರು ಪಯಣ. ಬೆಂಗಳೂರಿನಿಂದ ಮೈಸೂರು ತಲುಪುವ ವೇಳೆಗೆ ಎರಡು ದಿನಗಳು ಕಳೆದು ಹೋಗಿತ್ತು. ಈ ಮಧ್ಯದಲ್ಲಿ ಅಜ್ಜ ತನ್ನ ರೊಟ್ಟಿ ಬುತ್ತಿ ಬಿಚ್ಚುವ ಮಾತಿರಲಿ, ಬಾಯಿಗೆ ಒಂದು ಹನಿ ನೀರು ಸಹ ಹಾಕಿರಲಿಲ್ಲ. ಮೈಸೂರಿನ ನಮ್ಮ ಮನೆ ತಲುಪಿ, ಮಗ, ಸೊಸೆ, ಮೊಮ್ಮಕ್ಕಳಾದ ನಮ್ಮನ್ನೆಲ್ಲಾ ಭೇಟಿಯಾದರು. ನಂತರ ಸ್ನಾನ ಮಾಡಿ, ವಿಭೂತಿ ಧರಿಸಿ, ಲಿಂಗ ಪೂಜೆ ಮಾಡಿಕೊಂಡರು. ಇಷ್ಟೆಲ್ಲಾ ಆದ ನಂತರ ಊಟಕ್ಕೆ ಕುಳಿತರು.

ನನಗಿನ್ನೂ ಚೆನ್ನಾಗಿ ನೆನಪಿದೆ. ಅಜ್ಜ ತಂದ ರೊಟ್ಟಿಗಳನ್ನು ಗಾಳಿಯಾಡಲೆಂದು ಬಿಳಿ ಪಾವಡಿನ ಮೇಲೆ ಹರವಿ ಅವ್ವ ಇಟ್ಟಿದ್ದಳು. ಮಲೆನಾಡಿನ ಅವ್ವ ಇದೇನು ರೊಟ್ಟಿ ತಿನ್ನಲು ಆಗುವುದಿಲ್ಲ ಎನಿಸಿ, ಎಸೆಯುವುದೊ ಅಥವಾ ನಾಯಿಗೆ ಹಾಕುವುದೊ ಎಂದು ವಿಚಾರಿಸಿದಾಗ, ಅಪ್ಪ ಹೌಹಾರಿ ಬಂದು, ತನ್ನ ಆಸ್ತಿ ಕಳೆದುಕೊಂಡವರಂತೆ ಅದನ್ನು ತಮಗಾಗಿ ತೆಗೆದಿಟ್ಟುಕೊಂಡರು.

ಉತ್ತರ ಕರ್ನಾಟಕದ ಅಪ್ಪನ ರೊಟ್ಟಿ ಪ್ರೀತಿಯದು. ಅವ್ವ ಸದಾ ತಿಂಡಿಗಳನ್ನು ಮಾಡಿಟ್ಟಿರುತ್ತಿದ್ದಳು. ಅವಲಕ್ಕಿ, ನಿಪ್ಪಟ್ಟು, ಕಜ್ಜಾಯ, ರವೆ ಉಂಡೆ, ಕೋಡು ಬಳೆ, ಮುಂತಾದವು. ದಿನವಿಡೀ ಆಗಾಗ ತನ್ನಲು ಅಜ್ಜನಿಗೆ ಕೊಟ್ಟರೆ ಅವರಿಗೆ ಧರ್ಮ ಸಂಕಟದಲ್ಲಿ ಹಾಕಿದಂತಾಗುತ್ತಿತ್ತು. ‘ಇದೇನ್ ಬೆಟಾ ನೀ ಗಿಡಕ್ಕ ನೀರ ಹಾಕ್ದ್ಹಂಗೇ ಈಟು ಈಟು ಯಾನಾರ ತಿಲ್ಲಾಕ್ ಕೊಡ್ತಿ. ನಾ ಒಲ್ಲ. ಮುಂಜಾನಿ ಲಿಂಗಕ್ ನೀರ್ ಹಾಕಿ ಉಂಡ್ರ ಆಯ್ತು. ನಂಗ್ಯಾನು ಬ್ಯಾಡ’ ಎಂದು ಹೇಳುತ್ತಿದ್ದರು.

ನನ್ನವ್ವನೂ ದಿನಾ ಬೆಳಿಗ್ಗೆ ಲಿಂಗ ಪೂಜೆ ಮಾಡಿಕೊಳ್ಳುತ್ತ ವಚನಗಳನ್ನು ಹೇಳುತ್ತಿದ್ದ ನೆನಪು ಅಚ್ಚಳಿಯದೆ ಉಳಿದಿದೆ. ಈಗಲೂ ಅವ್ವನ ದನಿ ಕೇಳಿಸಿದಂತೆ ಭಾಸವಾಗುತ್ತದೆ.

‘ಹೊತ್ತಾರೆ ಎದ್ದು ಅಗ್ಗವಣಿಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸೋ ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯು ಮುಟ್ಟದ ಮುನ್ನ
ತುತ್ತುಗೆಲಸವ ಮಾಡು ನಮ್ಮ ಕೂಡಲಸಂಗಮದೇವನ’

ಈ ವಚನವನ್ನು ‘ಆನು ಒಲಿದಂತೆ ಹಾಡುವೆ’ ಎನ್ನುವ ರೀತಿಯಲ್ಲಿ ತನ್ಮಯಳಾಗಿ ಅವ್ವ ಹಾಡುತ್ತಿದ್ದಳು. ಹಳೆಯ ನೆನಪು ಈ ಲಾಕ್ ಡೌನ್ ಸಂದರ್ಭದಲ್ಲಿ ಮರುಕಳಿಸಿತು. ಮನೆಯಿಂದ ಹೊರಗೆ ಹೋದರೆ ಕ್ರಿಮಿಗಳು, ಕೀಟಗಳು, ರೋಗಾಣುಗಳು ನಮ್ಮ ಬೆನ್ನು ಹತ್ತಿ ಬಂದಿರುತ್ತವೆ ಎನ್ನುವ ಸತ್ಯದಿಂದ, ಇಂದಿನ ತಲೆಮಾರು ದೂರ ಉಳಿದುಕೊಂಡಿತ್ತು.

ಯಾವುದೇ ಆಲೋಚನೆ ಇಲ್ಲದೆ, ಹೊರಗಿನ ಆಹಾರ ಸೇವನೆ ಸರ್ವೆ ಸಾಮಾನ್ಯವಾಗಿ ಹೋಗಿತ್ತು. ಯುವಜನತೆ ಪ್ರತಿನಿತ್ಯ ಬರ್ತ್ ಡೇ ಮಾಡುವ ಟ್ರೆಂಡ್ ಶುರುವಾಗಿ ರಾತ್ರಿ ಊಟ ಫಿಕ್ಸ್ ಆಗಿರುತ್ತಿತ್ತು. ಫಾಸ್ಟ್ ಫುಡ್, ಜಂಕ್ ಫುಡ್ ಎಲ್ಲದಕ್ಕೂ ಕೆಲಕಾಲ ಬ್ರೇಕ್ ಹಾಕಿದಂತಾಗಿದೆ. ನಾರ್ಥ ಇಂಡಿಯನ್ ಡಿಶಸ್, ಪಿಜ್ಜಾ, ಬರ್ಗರ್ ಹೇಳ ಹೆಸರಿಲ್ಲದಂತೆ ಮಾಯವಾಗಿದೆ.

ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಫುಡ್ ರೆಡಿಯಾಗಿ ಬರುವಂತಾಗಿತ್ತು. ನಿಜ! ತಾಯಂದಿರಿಗೆ ಅಡಿಗೆ ಮಾಡುವುದು, ನೀಡುವುದು ಕಷ್ಟವೆನಿಸಬಹುದು. ಅದೂ ಮನೆಗೆಲಸದವರಿಲ್ಲದ ಸಮಯದಲ್ಲಿ ಇನ್ನೂ ಕಷ್ಟಕರ ಅನಿಸಬಹುದು. ಆದರೂ ಎಲ್ಲವನ್ನೂ ಸಹಿಸಿಕೊಂಡು ಮನೆಯಲ್ಲೇ ಇದ್ದು ಕೊವಿಡ್-19 ಗೆ ಅಂತ್ಯ ಹಾಡುವ ತುರ್ತು ಅಗತ್ಯವಿದೆ. ನಮಗಿಂತಲೂ ಕಷ್ಟದಲ್ಲಿದ್ದವರನ್ನು ನೋಡಿ ನಿಟ್ಟುಸಿರುಬಿಟ್ಟು ಸುಮ್ಮನಿರಬೇಕಾಗಿದೆ.

ಅದೆಷ್ಟೋ ಜನ ಬೀದಿ ಪಾಲಾದವರು ಬಹಳ ಕಷ್ಟದಲ್ಲಿದ್ದಾರೆ. ತುತ್ತು ಅನ್ನಕ್ಕಾಗಿ ಪರದಾಟ ನಡೆದಿದೆ. ದಿನಗೂಲಿಯ ಜನಕ್ಕೆ ದಿಕ್ಕೇ ತೋಚದಂತಾಗಿದೆ. ಗುಳೆ ಹೋದವರ ಹಣೆಬರಹ ಕೇಳಬಾರದು. ಪರಿಸ್ಥಿತಿ ಬಹಳ ವಿಕೋಪಕ್ಕೆ ಹೋಗದಂತೆ ತಡೆಯಲು ಎಲ್ಲರೂ ತಮ್ಮ ತಮ್ಮ ಕೈಲಾದಷ್ಟು ಸಹಕಾರ ನೀಡುತ್ತ ಈ ಸಂದಿಗ್ಧ ಪರಿಸ್ಥಿಯಿಂದ ಹೊರ ಬರಬೇಕಾಗಿದೆ.

ಹಿಂದೆ ಶರಣರು ಶಿವಯೋಗದ ಧ್ಯಾನಕ್ಕೆ ಮಹತ್ವ ನೀಡಿದ್ದರು. ಇಂದು ಮನೆಯಲ್ಲೇ ಲಾಕ್ ಡೌನ್ ಆದ ಸಂದರ್ಭದಲ್ಲಾದರೂ ಅದನ್ನೆಲ್ಲಾ ಅಳವಡಿಕೊಳ್ಳುವುದು ಸೂಕ್ತ. ಅದಕ್ಕಾಗಿಯೇ ನನ್ನವ್ವ ಮತ್ತು ನನ್ನಜ್ಜ ನೆನಪಾದರೆ ಆಶ್ಚರ್ಯ ಪಡುವಂತಿಲ್ಲ. ಇಡೀ ಜಗತ್ತನ್ನೇ ಆವರಿಸಿದ ವೈರಸ್ಸನ್ನು ನಾವೆಲ್ಲರೂ ಬದ್ಧತೆಯಿಂದ ಜೀವನ ಸಾಗಿಸಿ, ಆರೋಗ್ಯಕರ ಆಹಾರ ಸೇವಿಸಿ, ಒಳ್ಳೆಯ ದಿನಗಳನ್ನು ನಿರೀಕ್ಷಿಸೋಣ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here