ಉಳ್ಳವರು ಶಿವಾಲಯ ಮಾಡುವರು ಹಾಗೆಂದರೇನು?

1
346

ವ್ಯೋಮಕಾಯ ಅಲ್ಲಮ, ಶಿವಯೋಗಿ ಸಿದ್ಧರಾಮ, ಅವಿರಳ ಜ್ಞಾನಿ ಚೆನ್ನಬಸವಣ್ಣ, ವೀರ ವೀರಾಗಿಣಿ ಅಕ್ಕ ಮಹಾದೇವಿ, ಶ್ರೇಷ್ಠ ಕುಲತಿಲಕ ಮಾದಾರ ಚೆನ್ನಯ್ಯ ಮುಂತಾದ ನೂರಾರು ಶರಣರ ಮುಖ್ಯ ಬಿಂಧುವಾಗಿದ್ದ ಬಸವಣ್ಣನವರು ಹುಟ್ಟು ಹಾಕಿದ ವಚನ ಚಳವಳಿಯು, ಧ್ವನಿ ಇಲ್ಲದವರಿಗೆ ಧ್ವನಿ ಒದಗಿಸಿದ ಕಾಲ. ಅಸ್ಪೃಶ್ಯ, ದಲಿತ, ಸಾಮಾನ್ಯ ಜನರಿಗೂ ತಾವು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಪ್ರವೇಶ ನೀಡಿದ್ದಲ್ಲದೆ ಅವರೂ ಸಹ ವಚನ ರಚನೆ, ಚರ್ಚೆ, ಚಿಂತನೆ ಮಾಡುವಂತಹ ಸಮಾನ ಅವಕಾಶವನ್ನು ಒದಗಿಸಿಕೊಟ್ಟರು.

ಸಮಾಜದ ಎಲ್ಲ ರಂಗದಲ್ಲೂ ಸರಿಯಾದ ರಕ್ತ ಸಂಚಲನ ಆಗಬೇಕು. ಹಣ ಒಂದು ಕಡೆ ಜಮಾವಣೆಗೊಂಡರೆ ಸಮಾಜದಲ್ಲಿ ಏರುಪೇರುಗಳುಂಟಾಗುತ್ತವೆ. ಸಂಪತ್ತಿನ ಸಮಾನ ವಿಕೇಂದ್ರೀಕರಣ ಆಗಬೇಕು ಎಂಬ ಉದ್ದೇಶದಿಂದ ಎಲ್ಲರೂ ಸತ್ಯ ಶುದ್ಧ ಕಾಯಕ ಮಾಡಬೇಕು ಎಂಬ ಕಟ್ಟುನಿಟ್ಟಾದ ಅಲಿಖಿತ ಕಾನೂನು ಜಾರಿಗೆ ತಂದಿದ್ದರು. ಸತ್ಯ ಶುದ್ಧ ಕಾಯಕವೆಂದರೆ ಬೇರೆ ಇನ್ನೇನೂ ಅಲ್ಲ. ತನಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ದುಡಿದು ಸಂಪಾದನೆ ಮಾಡಬೇಕು. ಅಕಸ್ಮಾತ್ತಾಗಿ ಇಲ್ಲವೇ ಮುದ್ದಾಂ ಆಗಿ ಯಾರಾದರೂ ದುಡಿತಕ್ಕಿಂತ ಹೆಚ್ಚಿನದನ್ನು ಸಂಪಾದಿಸಿದರೆ ಅವರು ಮರಳಿ ಸಮಾಜಕ್ಕೆ ದಾಸೋಹ ಮಾಡಬೇಕು. ದುಡಿದುಣ್ಣುವುದರ ಜೊತೆಗೆ ದಾಸೋಹ ಕೂಡ ಅಷ್ಟೇ ಅಗತ್ಯ ಎಂಬ ದೃಢವಾದ ನಿಲುವು ಅವರದಾಗಿತ್ತು.

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೆ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ
ಕೂಡಲ ಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
Contact Your\'s Advertisement; 9902492681

ಬಸವಣ್ಣನವರ ಮೇಲಿನ ಈ ಜನಪ್ರಿಯ ವಚನ ಅತ್ಯಂತ ಸರಳವಾಗಿ ಕಂಡು ಬಂದರೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಬಸವಣ್ಣನವರು ಏನನ್ನೇ ಬೋಧನೆ ಮಾಡಿದರೂ ಅದರೊಂದಿಗೆ ತಮ್ಮನ್ನು ಸಮೀಕರಿಸಿಕೊಂಡು ನೋಡುವುದು ಅವರ ಮತ್ತೊಂದು ಗುಣಧರ್ಮವಾಗಿದ್ದರಿಂದ ತಾನು ಮುಖ್ಯಮಂತ್ರಿತ್ವ ಒದಗಿಸುವ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾಗಿದ್ದರೂ ತಾನು ಬಡವ ಎಂದು ಹೇಳಿಕೊಳ್ಳುತ್ತಾರೆ.

ಗುಡಿ-ಗುಂಡಾರಗಳನ್ನು ಕಟ್ಟಿ ಮೆರೆಯುವ ಶ್ರೀಮಂತರು ಬಡವರಲ್ಲಿ ಅಸೂಹೆ ಹುಟ್ಟಿಸುವ ಮೂಲಕ ಮುಗ್ಧರನ್ನು ಶೋಷಣೆ ಮಾಡುವವರ ಪರ ನಿಂತು ಬಡವರಿಗೆ ಇಲ್ಲದವರಿಗೆ ಬಸವಣ್ಣನವರು ಸಮಾಧಾನ ಹೇಳುವಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಇನ್ನೊಂದು ಅರ್ಥದಲ್ಲಿ ಬಡತನವನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ತಪ್ಪಾಗಿ ಕೂಡ ಅರ್ಥೈಸಲಾಗುತ್ತಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಗುಡಿ-ಗುಂಡಾರ ಕಟ್ಟುವ, ಅದರ ಸುತ್ತ ಸುತ್ತುವ ಪುರೋಹಿತಶಾಹಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆಯುವಂತೆ ಕರೆ ಕೊಡುವ ವಚನ ಇದಾಗಿದೆ ಎಂದು ಹೇಳಬಹುದು.

ದೇವಾಲಯ ಸಂಸ್ಕೃತಿ ಅದು ಸ್ಥಾವರವಾದುದು. ಉಳ್ಳವರ ಈ ಹುಂಬತನವನ್ನು ಬಡವರಾದವರು ನೋಡಿ ನೊಂದುಕೊಳ್ಳುವುದು ಬೇಡ. ಉಳ್ಳವರ ಪ್ರತಿನಿಧಿಯಂತಿರುವ ಈ ದೇವಾಲಯ ಸಂಸ್ಕೃತಿ ನಿನಗೆ ಬೇಡ. ಒಂದುವೇಳೆ ನೀನು ಅದಕ್ಕೆ ಆಸೆಪಟ್ಟು ಅಲ್ಲಿಗೆ ಹೋದರೆ ಅವರು ನಿನ್ನನ್ನು ಸುಲಿಗೆ ಮಾಡದೆ ಬಿಡುವುದಿಲ್ಲ. ಬಡತನ ಮನುಷ್ಯನಿಗೆ ಬದಕಲು ಪಾಠ ಕಲಿಸುತ್ತದೆ. ಗುಡಿ ಗುಂಡಾರ ಕಟ್ಟಿದವರು, ದೇವಾಲಯಗಳಿಗೆ ಹೋಗುವವರು ಒಂದಿಲ್ಲ ಒಂದಿನ ನಾಶವಾಗುವುದರ ಬೆನ್ನು ಹತ್ತಿದ್ದಾರೆ. ನೀನೂ ಅಂಥವರ ಬೆನ್ನು ಹತ್ತದೆ ನಿನ್ನ ಶರೀರವನ್ನೇ ದೇವಾಲಯವನ್ನಾಗಿ ಮಾಡಿಕೋ ಎಂದು ಬಡವರಲ್ಲಿ ಮನೋಸ್ಥೈರ್ಯವನ್ನು ತುಂಬಿದಂತಿದೆ ಅಣ್ಣನ ಈ ವಚನ.

ಬಹುಸಂಖ್ಯಾತರಾಗಿದ್ದ ಬಡವರ ನಡುವೆ ಹೊಸ ಬದುಕಿನ ಚಲನಶೀಲತೆ ತರಬೇಕಾದರೆ ಅವರ ಮಾನಸಿಕ ಸಂಪನ್ನತೆಯ ಕುರಿತು ಕೆಲ ಮೆಚ್ಚುಗೆಯ ಮಾತುಗಳನ್ನು ಆಡುವುದು ಒಬ್ಬ ಸಮಾಜ ವಿಜ್ಞಾನಿಯ ಕೆಲಸ. ಬಸವಣ್ಣ ಇಂತಹ ಸಮಾಜ ವಿಜ್ಞಾನಿಗಳಲ್ಲೊಬ್ಬ. ಆದ್ದರಿಂದ ಬಡವರ ಮಾನಸಿಕ ಸಂಪನ್ನತೆಯ ಬಗ್ಗೆ ಹೆಚ್ಚು ಗಮನ ಕೊಡುವ ಮೂಲಕ ಅವರಲ್ಲಿ ಹೊಸ ಬದುಕಿನ ಜೀವನೋತ್ಸಾಹ ತುಂಬಿಲು ಪ್ರಯತ್ನಿಸಿದರು. ಹೀಗಾಗಿ ಎನೆಗೆ ನನ್ನ ದೇಹವೇ ದೇವಾಲಯ, ಕಾಲುಗಳೇ ಕಂಬ, ಶಿರವೇ ಹೊನ್ನ ಕಳಸವಾಗಿದೆ. ನನ್ನದು ಸ್ವಾಭಿಮಾನದ ಬದುಕು ಎಂಬುದನ್ನು ಸಾಬೀತುಪಡಿಸುವ ವಚನ ಇದಾಗಿದೆ.

ಬದುಕಿನ ಎಲ್ಲ ಚಟುವಟಿಕೆಗಳ ಮೂಲ ದೇಹ! ದೇವಾಲಯಕ್ಕಿಂತ ದೇಹವೇ ಶ್ರೇಷ್ಠ. ಕಾಯಕದ ಮೂಲಕ ಕೈಲಾಸ ಕಾಣಲು ಸಾಧ್ಯವಿರುವಾಗ ಕಾಯವೇ ಕೈಲಾಸವನ್ನಾಗಿ ಮಾರ್ಪಡಿಸಿಕೊಳ್ಳುವುದು ಉಚಿತ. ಸ್ಥಾವರಕ್ಕೆ ಅಳಿವಿದೆ. ಆದರೆ ಜಂಗಮಕ್ಕೆ ಅಳಿವಿಲ್ಲ. ದೇವರು ಜಂಗಮ ಸ್ವರೂಪಿ. ಅರಿವೇ ಗುರು. ದೇವಾಲಯ ಕಟ್ಟಿಸಿದವರು ಕೆಲ ದಿನಗಳವರೆಗೆ ಮಾತ್ರ ನಮ್ಮನ್ನು ಶೋಷಣೆ ಮಾಡಬಹುದು. ಆದರೆ ಜ್ಞಾನ ಪಡೆದಾದ ಮೇಲೆ ದೇವಸ್ಥಾನಕ್ಕೆ ಹೋಗುವ ಪ್ರಮೇಯವೇ ಬರುವುದಿಲ್ಲ. ಜ್ಞಾನಕ್ಕೆ ಜಗತ್ತನ್ನಾಳುವ ಶಕ್ತಿಯಿದೆ. ಚೈತನ್ಯಮಯಿ ಆಗಿರುವ ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳುವುದು ಸರಿಯಾದ ಮಾರ್ಗವಾಗಿದೆ ಎಂಬ ಹೊಸ ಚಿಂತನೆಯನ್ನು ಬಸವಣ್ಣ ಆಗ ಜನರ ಮುಂದಿಟ್ಟರು. ಅಂತೆಯೇ ಆಗ ಜನರಿಗೆ ಪೂಜೆಗಿಂತ ಕಾಯಕವೇ ಮುಖ್ಯವಾಗಿತ್ತು.

1 ಕಾಮೆಂಟ್

  1. ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ…ಎಂಬ ಬಸವಣ್ಣನವರ ವಚನವನ್ನು ಅತ್ಯಂತ ತಾತ್ವಿಕ ವಾಗಿ ಹಾಗೂ ಅರ್ಥಪೂರ್ಣವಾಗಿ ವಿವರಿಸಿದ್ದೀರಿ…ಡಾ.ಬಿ.ಆರ್ ಅಂಬೇಡ್ಕರ್ ಅವರು ಒಂದು ಪ್ರಸಂಗದಲ್ಲಿ ಹೀಗೆ ಹೇಳುತ್ತಾರೆ…ದೇವಾಲಯಗಳಿಗಿಂತ ಗ್ರಂಥಾಲಯಗಳು ಶ್ರೇಷ್ಠ ಎಂಬ ಮಾತನ್ನು..ಇಲ್ಲಿ ಬಸವಣ್ಣನವರ ನಿಲುವಿನಲ್ಲಿ ವಿಶಾಲವಾದ, ವೈಜ್ಞಾನಿಕ ಮನೋಭಾವ,ಅಡಗಿದೆ..ಗುಡಿ-ಗುಂಡಾರಗಳು ದುಡಿಯದೇ ಇರುವವರನ್ನು ರಕ್ಷಣೆ ಮಾಡಿದರೆ ಇನ್ನು ಬಡವರ,ನಿರ್ಗತಿಕರ, ಮುಗ್ಧರನ್ನು ರಕ್ಷಿಸುವ ಮತ್ತು ಅವರನ್ನು ಶೋಷಣೆ ಯಿಂದ ಮಕ್ತರನ್ನಾಗಿಸುವ ಚಿಂತೆ ಬಸವಣ್ಣನವರನ್ನು ಕಾಡಿರಲೇಬೇಕು..ಒಟ್ಟಾರೇ ಈ ವಚನವನ್ನು ಅತ್ಯಂತ ಮನೋಜ್ಞವಾಗಿ ವಿವರಿಸಿದ್ದೀರಿ..ವಚನ ಸಾಹಿತ್ಯದ ನಿಮ್ಮ ಆಳ ಮತ್ತು ಬಸವಣ್ಣನವರ ವಚನವನ್ನು ಅರ್ಥೈಸಿ ಕೊಂಡು ರೀತಿ ತುಂಬಾ ಮೆಚ್ಚುಗೆ ಪಡುವಂತಹ ಸಂಗತಿ..ಇದೇ ರೀತಿ ಬಸವಾದಿ ಶರಣರ ವಚನಸಾಹಿತ್ಯ ವನ್ನು ಪಕ್ವ ವಾಗಿ ಅರ್ಥೈಸಿಕೊಂಡು ಸಮಾಜಕ್ಕೆ ಪರಿಚಯಿಸುವ ಕಾಯಕ ತಮ್ಮಿಂದ ನಿರಂತರವಾಗಿ ನಡೆಯುತ್ತಲೇ ಇರಲಿ ಎಂಬ ಆಶಯದೊಂದಿಗೆ…ತಮಗೆ ಶರಣು ಶರಣಾರ್ಥಿ…
    ಡಾ.ಗಂಗಾಧರಯ್ಯ ಹಿರೇಮಠ.ಪ್ರಾಧ್ಯಾಪಕರು,ದಾವಣಗೆರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here