ವಾಡಿ: ಭಾರಿ ಪ್ರಮಾಣದ ಬಿರುಗಾಳಿ ಮಳೆಗೆ ಸಿಕ್ಕು ಕೊರೊನಾ ಕಟ್ಟೆಚ್ಚರದ ಪೊಲೀಸ್ ಚೆಕ್‍ಪೋಸ್ಟ್ ಸೆಡ್ ಹಾರಿಹೋಗಿದ್ದು, ಕರ್ತವ್ಯ ನಿರತ ಪೊಲೀಸರು ಮಳೆಯಲ್ಲಿಯೇ ನೆನೆದು ನಿರಾಶ್ರಿತ ಭಾವ ಅನುಭವಿಸಿದರು.
ಕಲಬುರಗಿ-ಯಾದಗಿರಿ ಜಿಲ್ಲೆಗಳ ಗಡಿ ಭಾಗದ ಕುಂಬರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್ ಶುಕ್ರವಾರ ಸಂಜೆ ಬೀಸಿದ ಮಳೆ ಗಾಳಿಗೆ ಹಾರಿ ಹೋಗಿದೆ. ಪೊಲೀಸರಿಗೆ ನೆರಳಿನ ಆಸರೆ ಕಲ್ಪಿಸಲು ಹಾಕಲಾದ ಕಳಪೆ ಚೆಪ್ಪರ ಪೊಲೀಸರು ಮಳೆಯಲ್ಲಿ ನನೆಯುವಂತೆ ಮಾಡಿತು.
ಹಗಲು ರಾತ್ರಿ ಎನ್ನದೆ, ರಣ ಬಿಸಿಲು ಕಗ್ಗತ್ತಲು ಲೆಕ್ಕಿಸದೆ ಜಿಲ್ಲೆಯ ಪ್ರವೇಶ ಪಡೆಯುವ ವಾಹನಗಳ ತಪಾಸಣೆ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಆಸರೆ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು ಸ್ಪಷ್ಟವಾಗಿದೆ. ಕೊರೊನಾ ಸೋಂಕು ಗಡಿರೇಖೆ ದಾಟದಂತೆ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿರುವ ಪೊಲೀಸರಿಗೆ ಸುಸಜ್ಜಿತ ಚೆಕ್‍ಪೋಸ್ಟ್ ಸೆಡ್ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ಬೇಸರದ ಸಂಗತಿಯಾದರೆ, ಮಳೆ ಗಾಳಿ ಬಿಸಿಲಿನಿಂದ ಸುರಕ್ಷಿತವಲ್ಲದ ಜಾಗದಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ತಮ್ಮ ಕಷ್ಟ ಯಾರ ಎದುರಿಗೂ ಹೇಳಿಕೊಳ್ಳಲಗದೆ ಅಸಹಾಯಕ ಸ್ಥಿತಿಯಲ್ಲಿರುವುದು ನೋವಿನ ಸಂಗತಿಯೇ ಸರಿ.