ಕಲಬುರಗಿ: ‘ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು” ನಂಜುಂಡಿ ಕಲ್ಯಾಣ ಸಿನಿಮಾದ ಈ ಹಾಡು ಗುಂಡಿನ ಗಮ್ಮತ್ತು ಎಂಥದು? ಎಂಬುದನ್ನು ತೋರಿಸಿಕೊಡುತ್ತದೆ.
ಕೊರೊನಾ ವೈರಸ್ ನಿಂದಾಗಿ ಜಗತ್ತಿಗೆ ಜಗತ್ತು, ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿತ್ತು. ಈ ವೇಳೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿತ್ತು. ಆದರೆ ಮದ್ಯಪಾನ ಮಾರಾಟಕ್ಕೆ ಮಾತ್ರ ಬ್ರೇಕ್ ಹಾಕಲಾಗಿತ್ತು. ಇದರಿಂದಾಗಿ ಮದ್ಯಪ್ರಿಯರು ಕಂಗಾಲಾಗಿದ್ದರು. ಅಖಿಲ ಭಾರತ ಮತ್ತು ರಾಜ್ಯ ಮಟ್ಟದ ಕುಡುಕರ ಸಂಘದ ಪದಾಧಿಕಾರಿಗಳು ಅಂದಿನಿಂದ ಇಂಸಿನವರೆಗೆ ಸರ್ಕಾರದ ಮೇಲೆ ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸುತ್ತಲೇ ಬಂದಿದ್ದವು.
ಇದೀಗ ಲಾಕ್ ಡೌನ್ ಮೂರನೇ ಬಾರಿ ಮೇ ೧೭ರವರೆಗೆ ವಿಸ್ತರಿಸಲಾಗಿದ್ದರೂ, ಕ್ವಾರೈಂಟೈನ್ ಮತ್ತು ಕೆಂಪು ವಲಯ ಹೊರತುಪಡಿಸಿ ಉಳಿದ ಹಸಿರು ವಲಯ ಮತ್ತು ಆರೆಂಜ್ ವಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ.
ಇದರಿಂದಾಗಿ ಇಂದು ರಾಜ್ಯದ ಅನೇಕ ಕಡೆ ಮದ್ಯದಂಗಡಿಗಳ ಮುಂದೆ ಕುಡುಕರ ದಂಡು ಸರತಿ ಸಾಲಿನಲ್ಲಿ ನಿಂತು ಮದ್ಯ ಪಾರ್ಸೆಲ್ ಒಯ್ಯುತ್ತಿರುವುದು ಕಂಡು ಬಂದಿತು.
ಆರೆಂಜ್ ವಲಯದಲ್ಲಿ ಬರುವ ಕಲಬುರಗಿಯಲ್ಲಿ ಮಾತ್ರ ಜಿಲ್ಲಾಧಿಕಾರಿ ಮಧ್ಯಾಹ್ನದಿಂದ ಅನುಮತಿ ಕೊಟ್ಟಿದ್ದರಿಂದ ವೈನ್ ಶಾಪ್ ಮುಂದುಗಡೆ ಮಧ್ಯಾಹ್ನ ಮದ್ಯಾರಾಧನೆಗೋಸ್ಕರ ಸುಡುವ ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿರುವುದು ಕಂಡು ಬಂದಿತು.