ವಾಡಿ: ಮಹಾಮಾರಿ ಕೊರೊನಾ ರೋಗ ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದು, ಉದ್ಯೋಗ ಮತ್ತು ವ್ಯವಹಾರಗಳನ್ನು ಕೈಬಿಟ್ಟು ಜನರು ಗೃಹಬಂಧನದಲ್ಲಿದ್ದಾರೆ. ಕಟ್ಟಡ ಕಾರ್ಮಿಕರ ಹಿತದೃಷ್ಠಿಯಿಂದ ನಿರ್ಮಾಣ ಕಾಮಗಾರಿಗಳಿಗೆ ಸರಕಾರ ಅವಕಾಶ ನೀಡಿದ್ದರ ಲಾಭ ಪಡೆದುಕೊಳ್ಳಲು ಮುಂದಾಗಿರುವ ಅಕ್ರಮ ಮರಳು ದಂಧೆಕೋರರು, ಹಾಡಹಗಲೇ ಭೀಮಾ ನದಿಯ ಒಡಲು ಬಗೆಯಲು ಮುಂದಾಗಿ ಪೊಲೀಸರ ಅತಿಥಿಯಾಗಿದ್ದಾರೆ.
ಸಿಮೆಂಟ್ ನಗರಿ ವಾಡಿ ಪಟ್ಟಣ ಸಮೀಪದ ಕುಂದನೂರಿನ ಭೀಮಾನದಿ ಹಾಗೂ ಇಂಗಳಗಿ ಗ್ರಾಮದ ಕಾಗಿಣಾ ನದಿಗಳಲ್ಲಿ ಗುರುವಾರ ಮದ್ಯಾಹ್ನ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಮಾರ್ಗದರ್ಶನದಡಿ ದಾಳಿ ನಡೆಸಿರುವ ವಾಡಿ ಠಾಣೆಯ ಪಿಎಸ್‍ಐ ದಿವ್ಯಾ ಮಹಾದೇವ್ ಅವರು ಶಹಾಬಾದ ಮೂಲದ ನಾಲ್ಕು ಟ್ರ್ಯಾಕ್ಟರ್‍ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ವಾಹನಗಳನ್ನು ನದಿಪಾತ್ರದಲ್ಲೇ ಬಿಟ್ಟು ಹೋಡಿಹೋಗಿದ್ದಾರೆ ಎನ್ನಲಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ. ವಾರದ ಹಿಂದೆಯಷ್ಟೇ ಇದೇ ಭೀಮಾ ನದಿಯಲ್ಲಿ ಅಕ್ರಮ ಮರಳಿನ ಮೂರು ಟ್ರ್ಯಾಕ್ಟರ್‍ಗಳನ್ನು ಠಾಣಾಧಿಕಾರಿ ದಿವ್ಯಾ ಜಪ್ತಿ ಮಾಡಿದ್ದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಲಾಯಲ್ಟಿ ಪಡೆದು ಮರಳು ಸಾಗಿಸಬೇಕಾದ ಮರಳು ವ್ಯಾಪಾರಿಗಳು, ಅಕ್ರಮ ದಂಧೆಗಿಳಿದಿರುವುದು ಪೊಲೀಸರ ನಿದ್ದೆಗೆಡಿಸಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಎದ್ದುನಿಲ್ಲುವ ಮರಳು ಮಾಫಿಯಾದ ಮಂದಿ, ಈಗ ಹಾಡಹಗಲೇ ನಿರ್ಭಯವಾಗಿ ಭೀಮಾನದಿಯ ಮರಳು ಲೂಟಿಗಿಳಿಯುವ ಮೂಲಕ ಖಾಕಿಗೆ ಸವಾಲು ಹಾಕಿದ್ದಾರೆ. ರಾಜಕೀಯ ಬಲ ಹೊಂದಿದ್ದಾರೆ ಎನ್ನಲಾಗುತ್ತಿರುವ ಅಕ್ರಮ ಮರಳು ದಂಧೆಕೋರರಿಗೆ ಮೂಗುದಾರ ಹಾಕಲು ಪಣ ತೊಟ್ಟಿರುವ ಲೇಡಿ ಸಿಂಗಮ್ ದಿವ್ಯಾ ಮಹಾದೇವ್, ಭೀಮಾನದಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಮರಳು ಮಾಫಿಯಾಗೆ ಕಡಿವಾಣ ಹಾಕುವುದು ಎಂದರೆ ಖಾಕಿಗೂ ಸವಾಲೇ ಸರಿ.
“ಕುಂದನೂರು ಹತ್ತಿರದ ಭೀಮಾ ನದಿಯಿಂದ ಹಗಲು ಹೊತ್ತಿನಲ್ಲೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಟ್ರ್ಯಾಕ್ಟರ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ವಾಹನಗಳನ್ನು ನದಿಯಲ್ಲೇ ಬಿಟ್ಟು ಪರರಾರಿಯಾಗಿದ್ದಾರೆ. ಆದಷ್ಟು ಬೇಗ ಕದೀಮರನ್ನು ಪತ್ತೆಹಚ್ಚಲಾಗುವುದು. ಕಳೆದ ಇಪ್ಪತ್ತು ದಿನಗಳಲ್ಲಿ ಒಟ್ಟು ಏಳು ಮರಳು ದಂಧೆಯ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ. ನನ್ನ ಠಾಣಾ ವ್ಯಾಪ್ತಿಯಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆಯುವ ಯಾವುದೇ ಅಕ್ರಮ ದಂಧೆಯಾಗಲಿ, ಮುಲಾಜಿಯಿಲ್ಲದೆ ಅದಕ್ಕೆ ಕಡಿವಾಣ ಹಾಕಲಾಗುವುದು.” ತಿಳಿಸಿದ್ದ ದರೆ-ದಿವ್ಯಾ ಮಹಾದೇವ್. ಪಿಎಸ್‍ಐ, ಅಪರಾಧ ವಿಭಾಗ ವಾಡಿ ಠಾಣೆ.