ವಾಡಿ: ಪದವಿ ಶಿಕ್ಷಣ ಪಡೆದು ಖಾಸಗಿ ಶಾಲಾ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರು, ಅತ್ತ ನಿರುದ್ಯೋಗಿಗಳೂ ಅಲ್ಲ ಇತ್ತ ಸ್ವಯಂ ಉದ್ಯೋಗಿಗಳೂ ಅಲ್ಲ. ಲಾಕ್‌ಡೌನ್ ಜಾರಿಯಿಂದ ಪಠ್ಯ ಚಟುವಟಿಕೆಗಳಿಂದ ದೂರ ಇರುವ ಮೂಲಕ ತೊಂದರೆ ಅನುಭವಿಸುತ್ತಿರುವ ಈ ಬಡ ಶಿಕ್ಷಕ ಸಮುದಾಯವನ್ನು ಪರಿಹಾರ ಘೋಷಣಾ ಪಟ್ಟಿಯಲ್ಲಿ ಗುರುತಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವಾಡಿ ನಗರ ಘಟಕದ ಮುಖಂಡ, ಸ್ಥಳೀಯ ಖಾಸಗಿ ಕನ್ನಡ ಶಾಲೆಯ ಶಿಕ್ಷಕ ಯೇಸಪ್ಪ ಕೇದಾರ ಅವರು ಸರಕಾರದ ಮಲತಾಯಿ ದೋರಣೆಯನ್ನು ಖಂಡಿಸಿದ್ದಾರೆ. ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಗೋಳು ಚಿಂತಾಜನಕವಾಗಿದೆ. ರೈತರು, ಕೂಲಿ ಕಾರ್ಮಿಕರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳ ಬಗೆಗೆ ಹಲವರು ಕಾಳಜಿವಹಿಸುವುದನ್ನು ಕಾಣುತ್ತಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಶಿಕ್ಷಕರ ಬದುಕಿನ ಆರ್ಥಿಕ ಸಂಕಟ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ ಎಂದು ಅಸಮಧ ವ್ಯಕ್ತಪಡಿಸಿದ್ದಾರೆ.
ಈ ಶಿಕ್ಷಕ ವರ್ಗ ಉಪವಾಸ ಬಿದ್ದರೂ, ಎಷ್ಟೇ ಕಷ್ಟಗಳು ಎದುರಾದರೂ ಯಾರಮುಂದೆಯೂ ಮನವಿ ಬೇಡಿಕೆ ಇಡಲು ಮುಜುಗರ ಹಾಗೂ ಹಿಂಜರಿಕೆ ಪಡುತ್ತಾರೆ. ರಾಜ್ಯದಲ್ಲಿ ೩ ಲಕ್ಷಕ್ಕೂ ಹೆಚ್ಚು ಶಿಕ್ಷಕರು ಅನುದಾನ ರಹಿತ ಖಾಸಗಿ ಶಾಲಾ ಕಾಲೇಜುಗಳಲ್ಲಿ ದುಡಿಯುತ್ತಿದ್ದಾರೆ. ಸಾಲಾ ಆಡಳಿತ ಮಂಡಳಿಯವರು ನೀಡಿದ್ದೇ ವೇತನ ಎಂಬ ಅಸಹನೀಯ ಸ್ಥಿತಿಯಲ್ಲಿ ಮಕ್ಕಳ ಭವಿಷ್ಯ ಬರೆಯುತ್ತಿದ್ದಾರೆ. ಲಾಕ್‌ಡೌನ್ ಘೋಷಣೆಯಿಂದ ಶೈಕ್ಷಣಿಕ ಚಟುವಟಿಕೆ ನಿಂತು ಹೋಗಿದೆ. ಶೇ.೮೫ ರಷ್ಟು ಖಾಸಗಿ ಸಂಸ್ಥೆಗಳು ವರ್ಷದ ಮೂರು ತಿಂಗಳು ಅಲ್ಲಿಯ ಸಿಬ್ಬಂದಿಗೆ ಮತ್ತು ಶಿಕ್ಷಕರಿಗೆ ಸಂಬಳ ನೀಡುವುದಿಲ್ಲ.
ಕೊರೊನಾ ಹೋರಾಟದಲ್ಲಿ ಜಾರಿಗೆ ಬಂದಿರುವ ಲಾಕ್‌ಡೌನ್ ದಿನಗಳಲ್ಲಿ ಈ ಶಿಕ್ಷಕ ವರ್ಗದ ಪರಸ್ಥಿತಿ ಪಾತಾಳಕ್ಕೆ ಕುಸಿದಿದೆ. ಹತ್ತು ಹದಿನೈದು ವರ್ಷಗಳಿಂದ ಬೋಧನೆಯೇ ಶ್ರೇಷ್ಠ ಧರ್ಮ ಎಂದು ನಂಬಿಕೊಂಡು ಬೇರೆ ದುಡಿಮೆ, ಆದಾಯವಿಲ್ಲದೆ ಬದುಕುತ್ತಿರುವ ಶಿಕ್ಷಕರ ಬದುಕು ಬೀದಿಗೆ ಬರಲಿದೆ. ತಮ್ಮೂರಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೂ ಹೋಗುವಂತಿಲ್ಲ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಇನ್ನೂ ಆಗಸ್ಟ್ ವರೆಗೂ ಶಾಲಾ ಕಾಲೇಜುಗಳು ಆರಂಭಗೊಳ್ಳುವ ಸಾಧ್ಯತೆಯಿಲ್ಲ. ಇದು ಬದುಕಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇಷ್ಟಾದರೂ ಪದವಿಧರ ಕ್ಷೇತ್ರದಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರಿಗೆ ಇವರ ಗೋಳು ಕಾಣುವುದಿಲ್ಲ ಎಂದು ದೂರಿದ್ದಾರೆ.
ಕೂಡಲೇ ಸರಕಾರ ಎಚ್ಚೆತ್ತುಕೊಳ್ಳಬೇಕು. ಈ ಬಡ ಶಿಕ್ಷಕರ ಜೀವನಾವಶ್ಯಕ ಸಾಮಾಗ್ರಿ ವಿತರಣೆ ಮತ್ತು ಪರಿಹಾರ ಧನ ಘೋಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.