ವಾಡಿ: ಕೇವಲ 60 ಜನ ಕಾರ್ಮಿಕರಿಂದ ಆರಂಭಿಸಲಾಗಿದ್ದ ಉದ್ಯೋಗ ಖಾತ್ರಿ ಕೆಲಸಕ್ಕೆ ಈಗ 540 ಜನ ಶ್ರಮಿಕರು ಕೈ ಜೋಡಿಸಿದ್ದಾರೆ. ಸ್ವಂತ ಜಮೀನುಗಳಲ್ಲಿ ಬದು ನಿರ್ಮಾಣ ಹಾಗೂ ಕೆರೆ ಹೂಳೆತ್ತುವ ಕಾಯಕದಲ್ಲಿ ತೊಡಗುವ ಮೂಲಕ ಕೊರೊನಾ ತಂದಿಟ್ಟ ಸಂಕಟದ ದಿನಗಳನ್ನು ಎದುರಿಸುತ್ತಿದ್ದಾರೆ.
ಕೆಲಸವಿಲ್ಲದೆ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದ ಗ್ರಾಮದ ಕಾರ್ಮಿಕ ಮಹಿಳೆಯರಿಗೆ ಉದ್ಯೋಗ ಖಾತ್ರಿಪಡಿಸಿರುವ ಯಾಗಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾರ್ವತಿ ಪೂಜಾರಿ, ಕೆಲಸ ಕೇಳಲು ಬರುತ್ತಿರುವವರೆಲ್ಲರಿಗೂ ಕೂಲಿ ಒದಗಿಸುತ್ತಿದ್ದಾರೆ. ಕೇಂದ್ರ ಸರಕಾರದ ಮಾಹಾತ್ಮಾ ಗಾಂದಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಮೂಲಕ ಖಾತ್ರಿ ಯೋಜನೆಗೆ ಮತ್ತಷ್ಟು ಚುರುಕು ಮೂಡಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಹರಡಲು ಘೋಷಣೆಯಾಗಿರುವ ಲಾಕ್‍ಡೌನ್ ನಿಯಮವನ್ನು ಪಾಲಿಸುವ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕರು ಕೆಲಸದಲ್ಲಿ ತೊಡಗುತ್ತಿದ್ದಾರೆ. ಉದ್ಯೋಗ ಅರಸಿ ವಿವಿಧೆಡೆ ವಲಸೆ ಹೋಗಿದ್ದ ಗ್ರಾಪಂ ವ್ಯಾಪ್ತಿಯ ವಿವಿಧ ತಾಂಡಾಗಳ ಜನರು ಮರಳಿ ಬಂದಿದ್ದಾರೆ. 14 ದಿನಗಳ ಕ್ವಾರಂಟೈನ್ ಎದುರಿಸಿ ಆರೋಗ್ಯ ಕಾಪಾಡಿಕೊಂಡ ಕಾರ್ಮಿಕರಿಗೂ ಗ್ರಾಮದಲ್ಲಿ ಉದ್ಯೋಗ ಖಾತ್ರಿಪಡಿಸಲಾಗುವುದು ಎಂದು ಪಿಡಿಒ ಪಾರ್ವತಿ ಪೂಜಾರಿ ಪ್ರತಿಕ್ರೀಯಿಸಿದ್ದಾರೆ.