ನಾಲವಾರ ವಲಯದಲ್ಲಿ ನಾಲಿಗೆ ಚಾಚಿದ ಮಹಾ ಕೊರೊನಾ!

0
67

ವಾಡಿ: ಮರಳಿ ಬಂದ ಮಹಾ ಗುಳೆ ಕಾರ್ಮಿಕರನ್ನು ದೊಡ್ಡ ಮಟ್ಟದಲ್ಲಿ ಹೊತ್ತು ನಿಂತಿರುವ ಚಿತ್ತಾಪುರ ತಾಲೂಕಿನ ಕ್ವಾರಂಟೈನ್ ಕೇಂದ್ರಗಳು, ಕೊರೊನಾ ಸೋಂಕಿತರ ತಾಣಗಳಾಗಿ ತಲ್ಲಣಿಸುತ್ತಿವೆ. ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಿಂದಲೇ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮಹಾರಾಷ್ಟ್ರದಿಂದ ಕಾರ್ಮಿಕರೊಂದಿಗೆ ಸೋಂಕು ಕೂಡ ಕಲ್ಯಾಣ ನಾಡಿಗೆ ವಲಸೆ ಬಂದಂತಾಗಿದೆ.

ಮಂಗಳವಾರ ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 7 ಪ್ರಕರಣಗಳು ಪತ್ತೆಯಾಗಿದ್ದರೆ, ಬುಧವಾರ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಹಳಕರ್ಟಿ ದರ್ಗ ಕ್ವಾರಂಟೈನ್‍ನಲ್ಲಿ ನಾಲವಾರ ಸ್ಟೇಷನ್ ತಾಂಡಾಕ್ಕೆ ಸೇರಿದ ಪತಿ ಪತ್ನಿ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಅರಣಕಲ್ ತಾಂಡಾದಲ್ಲಿ ಮೂರು, ಬುಗಡಿ ತಾಂಡಾದಲ್ಲಿ ಎರಡು ಪ್ರಕರಣಗಳು ಕಾಣಿಸಿಕೊಂಡಿದ್ದವು. ಬುಧವಾರ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಳವಡಗಿ ಗ್ರಾಮದ 26 ವರ್ಷದ ಪುರುಷನಿಗೆ ಮತ್ತು ಯಾಗಾಪುರ ಗ್ರಾಮದ 50 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದ ವಲಸಿಗರು ಎಂಬುದು ಖಚಿತವಾಗಿದೆ.

Contact Your\'s Advertisement; 9902492681

ನಗಾವಿ ನಾಡಿಗೆ ಕೊರೊನಾ ಕರಿನೆರಳು: ಮಹಾರಾಷ್ಟ್ರದಿಂದ ವಲಸಿ ಬಂದ ಕಾರ್ಮಿಕರಲ್ಲಿ ಚಿತ್ತಾಪುರ ತಾಲೂಕಿನದ್ದೇ ಸಿಂಹ ಪಾಲು. ತಾಲೂಕಿನ ವಿವಿಧ ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 7000ಕ್ಕೂ ಹೆಚ್ಚು ಕಾರ್ಮಿಕರು ತಂಗಿದ್ದಾರೆ. ಇವರಲ್ಲಿ ಶೇ.95 ರಷ್ಟು ತಾಂಡಾ ನಿವಾಸಿಗಳಾಗಿದ್ದಾರೆ. ಗುಳೆ ಕಾರ್ಮಿಕರಿರುವ ಜಿಲ್ಲೆಯ ಅತಿ ದೊಡ್ಡ ತಾಲೂಕು ಎಂದರೆ ಅದು ಚಿತ್ತಾಪುರ ಎನ್ನುವಷ್ಟರಮಟ್ಟಿಗೆ ಗಮನ ಸೆಳೆಯುತ್ತಿದೆ. ಈ ಭಾಗದ ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರ ಸಂಖ್ಯೆ ಬೆಳೆಯುತ್ತಿದ್ದು, ನಾಳೆ ಮತ್ಯಾರಲ್ಲಿ ಈ ಮಹಾಮಾರಿ ಕಾಣಿಸಿಕೊಳ್ಳಲಿದೆಯೋ? ಎಂಬ ಆತಂಕ ಹಾಸುಹೊಚ್ಚಾಗಿದೆ. ಕ್ವಾರಂಟೈನ್ ಪರೀಕ್ಷೆ ಎದುರಿಸುತ್ತಿರುವ ಕಾರ್ಮಿಕರಿಗೆ ಕನಸಲ್ಲೂ ಕೊರೊನಾ ಕಾಡಲು ಶುರುಮಾಡಿದೆ.

ಥರ್ಮಲ್ ಸ್ಕ್ರೀನಿಂಗ್‍ಗೆ ಹಣೆಯೊಡ್ಡಿದ ಕಾರ್ಮಿಕರು: ಜಿಲ್ಲೆಯ ಅತಿ ದೊಡ್ಡ ಕ್ವಾರಂಟೈನ್ ಕೇಂದ್ರ ಹಳಕರ್ಟಿಯ ದರ್ಗಾದಲ್ಲಿ ಪತಿ-ಪತ್ನಿಗೆ ಸೋಂಕು ದೃಢಪಡುತ್ತಿದ್ದಂತೆ ಇಲ್ಲಿ ತಂಗಿರುವ 900 ಕಾರ್ಮಿಕರು, ಥರ್ಮಲ್ ಸ್ಕ್ರೀನಿಂಗ್‍ಗೆ ಹಣೆಯೊಡ್ಡಲು ಮುಂದೆ ಬಂದಿದ್ದಾರೆ. ಬುಧವಾರ ದರ್ಗಾ ಕ್ವಾರಂಟೈನ್ ಕೇಂದ್ರದಲ್ಲಿ ವಾಡಿ ಪುರಸಭೆ ವತಿಯಿಂದ ಕ್ರಿಮಿನಾಶಕ ಸಿಂಪರಣೆ ಮತ್ತಷ್ಟು ಚುರುಕುಗೊಂಡಿದೆ.

ನೂರಾರು ಸಂಖ್ಯೆಯ ಕಾರ್ಮಿಕರು ಸರತಿಸಾಲಿನಲ್ಲಿ ನಿಂತು ದೇಹದ ಉಷ್ಣಾವಂಶ ಪರೀಕ್ಷೆ ಮಾಡಿಸಿಕೊಂಡರು. ಸೋಂಕಿತರು ವಾಸವಿದ್ದ ಕೋಣೆಗೂ ಕ್ರಿಮಿನಾಶ ಸಿಂಪರಣೆ ಮಾಡಿ ಬೀಗ ಹಾಕಲಾಗಿದೆ. ಕರ್ತವ್ಯನಿರತ ಆರೋಗ್ಯ ಸಿಬ್ಬಂದಿಗಳು, ಕಾರ್ಮಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಹೇಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here