ಚಂದ್ರ ದರ್ಶನ ಆಗುವುದಾದರು ಹೇಗೆ, ಬಾನು ತುಂಬಾ ದ್ವೇಷದ ಪರದೆ ಅಡ್ಡ ಬಂದಿರುವಾಗ ಅದರ ಮರೆಯಲ್ಲಿ ಚಂದ್ರ ದರ್ಶನವಿಟ್ಟು ಹೊರಟಿದ್ದಾನೆ ಯಾರಿಗೂ ತಿಳಿಯದಂತೆ
ಚಂದ್ರ ಬಂದಿದ್ದು ಇವತ್ತಲ್ಲ ಮೊನ್ನೆ ಕಾರ್ಮಿಕನೊಬ್ಬ ರಸ್ತೆಗೆ ಇಳಿದು ನಡೆಯ ಹೊರಟಾಗಲೇ ಬಂದಿದ್ದಾನೆ, ಅವನ ಕಾಲ ಪಾದದಿಂದ ಹರಿದ ನೆತ್ತರಿನಲ್ಲೊಂದು ಮುಖ ಕಂಡಿತ್ತಲ್ಲ ಅದೇ ಚಂದ್ರ
ಸುಮ್ಮನೆ ಚಂದ್ರನ ದರ್ಶನಕ್ಕಾಗಿ ಕಾದು ಕೂರಬೇಡಿ ಅದೇ ಮೊನ್ನೆ ತಾಯಿಯೊಬ್ಬಳು ನಡು ರಸ್ತೆಯಲ್ಲೇ ಚಂದ್ರನ ಚೂರೊಂದಕ್ಕೆ ಜನ್ಮಕೊಟ್ಟಳಲ್ಲ.! ಅಂದೇ ಚಂದ್ರ ಕಣ್ಣೀರಿನ, ಹಸಿವಿನ, ನೋವಿನ ರೂಪದಲ್ಲಿ ದರ್ಶನ ಕೊಟ್ಟಿದ್ದಾನೆ
ಚಂದ್ರ ನನಗೂ ಕಂಡಿಲ್ಲ, ಮೊನ್ನೆ ಬೀದಿಯಲ್ಲಿ ಅವನೊಬ್ಬ ತನ್ನ ಕಂಕುಳಲ್ಲಿ ಗೆಳಯನೊಬ್ಬನ ಕೊನೆಯುಸಿರು ನೋಡಿದನಲ್ಲ, ಕಂಡಿದ್ದು ಅವನಿಗೆ ಮಾತ್ರ ಮೂಗಿನಿಂದ ಅಣಿಮೆಯಂತೆ ಚಂದ್ರ ಅಂದು ದರ್ಶನವಿಟ್ಟು ಹೋಗಿದ್ದಾನೆ
ತಪ್ಪು.! ಚಂದ್ರ ಬಾನಲ್ಲಿದ್ದಾನೆಂದು ಅಂದುಕೊಂಡಿರಾ..? ಹಸಿವಿನಿಂದ ರಸ್ತೆಯ ಮಧ್ಯಕ್ಕೆ ಕೊಳೆತು ನಾರಿದ ಶ್ವಾನದ ಮಾಂಸ ಭರಪೂರ ತಿಂದನಲ್ಲ ಅವನ ಅಂಗೈ ತುದಿಗಿದ್ದ ಮಾಂಸದ ಚೂರೇ ಚಂದ್ರ! ಅವನಿಗದು ತಿಳಿಯಲೇ ಇಲ್ಲ
ಆ ಶವ್ವಾಲಿನ ಚಂದ್ರ ಪಂಡಿತರಿಗೂ ಕಾಣಿಸಲ್ಲ ಸೂರು ನೋಡುತ್ತಲೇ ಮಟಮಟ ಮಧ್ಯಾಹ್ನ ‘ಚಿನ್ನ’ದ ರಸ್ತೆಯ ಮೇಲೆ ನಡೆದರಲ್ಲ ಈ ಶವ್ವಾಲಿನ ಚಂದ್ರ ಅವರ ಕಣ್ಣೊಳಗಿದ್ದ
ಆ ಚಂದ್ರನಿಗೂ ಹಸಿವಿತ್ತು, ನನಗೂ ಇತ್ತು ನನ್ನದು ಸಂಕಲ್ಪವಾಗಿತ್ತು, ಅವನಿಗದು ಅನಿವಾರ್ಯವಾಗಿತ್ತು; ಹೌದು, ಚಂದ್ರನ ಕಾಣದ ನನಗೆ ಯಾವ ಈದ್, ಯಾವ ಫಿತ್ರ್..?