ಕಲಬುರಗಿ: 2019ನೇ ಸಾಲಿನ ಕಡ್ಡಾಯ ವರ್ಗಾವಣೆ ಕಾಯ್ದೆಯಡಿಯಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲ ತಾಲೂ/ ಜಿಲ್ಲೆಗಳಿಗೆ ವಿಶೇಷ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಸಮಸ್ತ ಶಿಕ್ಷಕ ವೃಂದಕ್ಕೆ ಅನುಕೂಲವಾಗುವಂತೆ ಕರ್ನಾಟಕ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ಶಿಕ್ಷಕರ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ಜಾರಿಗೊಳಿಸಿದ್ದಕ್ಕಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.
2019ರಲ್ಲಿ ಕಡ್ಡಾಯ ವರ್ಗಾವಣೆ ಪೂರ್ವ ಮತ್ತು ಹೊಸ ಕಾಯ್ದೆ ರೂಪಿಸುವ ಸಂದರ್ಭದಲ್ಲಿ 2019ನೇ ಸಾಲಿನ ಕಡ್ಡಾಯ ವರ್ಗಾವಣೆಯಡಿಯಲ್ಲಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಏಪ್ರಿಲ್-2020 ರಲ್ಲಿ ವಿಶೇಷ ವರ್ಗಾವಣೆ ಪ್ರಕರಣದಡಿಯಲ್ಲಿ ಮರಳಿ ಅವರ ಮೂಲಕ ತಾಲೂಕ/ಜಿಲ್ಲೆಗಳಿಗೆ ಕೌನ್ಸ್‍ಲಿಂಗ್ ಮೂಲಕ ವರ್ಗಾವಣೆ ಮಾಡುವುದಾಗಿ ಈ ಹಿಂದೆ ನೀಡದ ಭರವಸೆಯನ್ನು ಗೌರವಪೂರ್ವಕವಾಗಿ ಸ್ಮರಿಸುತ್ತ, 2019ನೇ ಸಾಲಿನ ಕಡ್ಡಾಯ ವರ್ಗಾವಣೆಯಲ್ಲಿ ಕಲಬುರಗಿ ಜಿಲ್ಲೆಯಿಂದ 67ಕ್ಕಿಂತಲೂ ಹೆಚ್ಚು ಜನ ಶಿಕ್ಷಕರು ರಾಯಚೂರ ಹಾಗೂ ಬಳ್ಳಾರಿ ಜಿಲ್ಲೆಗೆ ವರ್ಗಾವಣೆಯಾಗಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ವಯಸ್ಸಿನ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದರು.
ಕೋವಿಡ್-19 ರ ವಿಷಯ ಪರಿಸ್ಥಿತಿಯಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಊಟ, ವಸತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಾಮಾನ್ಯ ಶಿಕ್ಷಕರ ವರ್ಗಾವಣೆಗಾಗಿ ರೂಪಿಸುತ್ತಿರುವ ಹೊಸ ನಿಯಮಾವಳಿಗಳು 2019 ರಲ್ಲಿ ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರಿಗೆ ಅನ್ವಯಿಸದ ಹಿನ್ನಲೆಯಲ್ಲಿ ದಯಮಾಡಿ ಜೂನ್-2020 ರೊಳಗಾಗಿ ಕೌನ್ಸಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಬೇಕು. ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯಮುಗಿದ ನಂತರ ನಮ್ಮ ಮೂಲ ಜಿಲ್ಲೆಗಳಿಗೆ ಬಿಡುಗಡೆ ಮಾಡಲು ಆದೇಶಿಸಿ ಸಂಕಷ್ಠದಲ್ಲಿರುವ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್.ಜಿ. ನಮೋಶಿ ಅವರು ಮನವಿ ಮಾಡಿದರು.