ಕಲಬುರಗಿ : ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರ್‍ವಾಣಿ ಸಮುದಾಯ ಕೇಂದ್ರದ ಎಂಟಿನಾದಲ್ಲಿ ಕಳೆದ ಕೆಲವು ದಿನಗಳಿಂದ ಸಮಸ್ಯೆ ಉಂಟಾಗಿ ಕಾರ್ಯಕ್ರಮ ಪ್ರಸಾರದಲ್ಲಿ ತೊಂದರೆ ಉಂಟಾಗಿತ್ತು. ಶುಕ್ರವಾರ (ದಿ.5-6-2020) ರಂದು ಈ ಸಮಸ್ಯೆಯನ್ನು ಬಗೆ ಹರಿಸಲಾಗಿದೆ.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಅನಿಲಕುಮಾರ ಬಿಡುವೆ ಅವರು ಕೈಗೊಂಡ ಗಟ್ಟಿ ನಿರ್ಧಾರ ಮತ್ತು ಪರಿಶ್ರಮದಿಂದಾಗಿ ಕಷ್ಟಕರವಾದ ಈ ಕಾರ್ಯ ಸಾಧ್ಯವಾಗಿದೆ. ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಅನಿಲಕುಮಾರ ಬಿಡುವೆ ಅವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ ಕಮ್ಯೂನಿಕೇಶನ, ಮೇಕಾನಿಕಲ್ ಮತ್ತು ಎಲೆಕ್ಟ್ರೀಕಲ್ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಕುಮಾರ ಜವಳಗಿ, ಪ್ರೊ.ಶರಣು ಶೇಗೆದಾರ, ಪ್ರೊ.ಸಂಜೀವಕುಮಾರ , ಪ್ರೊ.ಪ್ರವೀಣ ಹಿಪ್ಪರಗಿ ಸಹಾಯಕರಾದ ಕಾಶೀನಾಥ, ಜಯಚಂದ್ರ, ಸಂತೋಷ ಹಾಗೂ ಲೋಕೇಶ ಅವರು ನಿರಂತರವಾಗಿ 8 ತಾಸುಗಳವರೆಗೆ ಪರಿಶ್ರಮ ವಹಿಸಿ ಎಂಟಿನಾದಲ್ಲಿ ಉಂಟಾದ ಸಮಸ್ಯೆಯನ್ನು ಬಗೆಹರಿಸಿ ಕೇಳುಗರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.
ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಚಾನ್ಸಲರ್ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಎಂತಹ ದುಸ್ತರವಾದ ಕಾರ್ಯವನ್ನು ಸಾಧ್ಯ ಮಾಡಿ ತೋರಿಸುವ ಪ್ರಾಧ್ಯಾಪಕರು ನಮ್ಮಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶ್ರೇಷ್ಠಮಟ್ಟದ ಈ ಸೇವೆ ಮತ್ತು ಪರಿಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘೀಸಿ ಆಶೀರ್ವಾದ ರೂಪದ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನೂ ಮುಂದೆ ಪ್ರತಿನಿತ್ಯ ಬೆಳಗ್ಗೆ 6 ರಿಂದ 11 ಗಂಟೆವರೆಗೂ ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆವರೆಗೂ 90.8 ಕಂಪನಾಂಕಗಳಲ್ಲಿ ಅಂತರ್‍ವಾಣಿ ಸಮುದಾಯ ರೇಡಿಯೋ ಕೇಂದ್ರದ ಶ್ರೇಷ್ಠ ಮಟ್ಟದ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಕೇಳುಗರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರದ ನಿರ್ದೇಶಕರಾದ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಮತ್ತು ಕಾರ್ಯಕ್ರಮ ನಿರ್ವಾಹಕರಾದ ಪ್ರೊ. ಕೃಪಾಸಾಗರ ಗೊಬ್ಬುರ ಅವರು ಮನವಿ ಮಾಡಿಕೊಂಡಿದ್ದಾರೆ.