ಕಲಬುರಗಿ: ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಶರಣ ಸಂಘಟನೆ ಮೂಲತಃ ಭಕ್ತಿ ಪರಿಕಲ್ಪನೆಯ ಮೇಲೆ ನಿಂತಿದೆ. ಬಸವಣ್ಣನವರ ಭಕ್ತಿ ಮೀರಾಬಾಯಿ ಭಕ್ತಿಯಂತೆ ಕೇವಲ ಪ್ರಾರ್ಥನೆಯ ಸ್ವರೂಪದಲ್ಲ. ಶಿವನಿಗೆ ಒಂದನ್ನು ಕೊಟ್ಟು ಒಂದನ್ನು ಪಡೆಯುವ ಬೇಡರ ಕಣ್ಣಪ್ಪ, ಶಿರಿಯಾಳ ಚಂಗಳೆಯರಂತಹದೂ ಅಲ್ಲ. ಬಸವಣ್ಣನವರ ಭಕ್ತಿ ಮಾನವೀಯ ಅಂತಃಕರಣದ ಮೇಲೆ ನಿಂತಂಥದ್ದು. ಮಮತೆ, ಪ್ರೀತಿ, ಕರುಣೆ, ಅಂತಃಕರಣಗಳನ್ನು ಮಿಡಿಯುವ, ಅವಶ್ಯವಿದ್ದವರಿಗೆ ನೀಡಲು ಹಾತೊರೆಯುವ, ಕೊಟ್ಟು ತೃಪ್ತಿ ಪಡೆವ ಭಾವನೆಯ ಭಕ್ತಿಯಾಗಿದೆ. ಇದು ಮಾನವ ಮನಸ್ಸುಗಳನ್ನು ಪರಸ್ಪರ ಬೆಸೆಯುವ, ಅಂತಃಕರಣವುಳ್ಳ ಭಾವನೆ ಮತ್ತು ಆಚರಣೆ ಉಳ್ಳ ಭಕ್ತಿಯಾಗಿದೆ ಎಂದು ಡಾ. ವೀರಣ್ಣ ದಂಡೆ ಅವರು ಅಭಿಪ್ರಾಯಪಟ್ಟರು.
ಬಸವ ಸಮಿತಿಯ ಅನುಭವ ಮಂಟಪದಲ್ಲಿ, ಲಿಂ. ಶ್ರೀಮತಿ ನೀಲಮ್ಮ, ಲಿಂ. ಶರಣಪ್ಪ ಕಲ್ಲಪ್ಪ ವಾಲಿ, ಹಾಗೂ ಲಿಂ. ದಾನಮ್ಮ, ಲಿಂ. ವೀರಪ್ಪ ಅನಂತಪುರ ಸ್ಮರಣಾರ್ಥ ಆನ್‍ಲೈನ್ ಅರಿವಿನ ಮನೆ ದತ್ತಿ ಕಾರ್ಯಕ್ರದಲ್ಲಿ ಭಾಗವಹಿಸಿ ‘ಬಸವಣ್ಣನವರ ಸಂಘಟನ ಸಾಮಥ್ರ್ಯ ಮತ್ತು ಶರಣ ಸಂಘಟನೆಯ ರಾಚನಿಕ ಸ್ವರೂಪ’ ವಿಷಯ ಕುರಿತು ಪ್ರಾತ್ಯಕ್ಷಿಕೆ (ಪಾವರ್ ಪಾಯಿಂಟ್ ಪ್ರಜಂಟೇಶನ್) ಮೂಲಕ ಉಪನ್ಯಾಸ ಕೊಟ್ಟರು. ಈ ದಿನ ಭಾರತದ ರಾಷ್ಟ್ರಪತಿಗಳೂ ಕರ್ನಾಟಕದ ಮುಖ್ಯಮಂತ್ರಿಗಳೂ ಆಗಿ ಸೇವೆ ಸಲ್ಲಿಸಿದ, ಬಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಬಿ.ಡಿ. ಜತ್ತಿ ಅವರು ಲಿಂಗೈಕ್ಯರಾದ ದಿನವೂ ಆಗಿದ್ದು, ಡಾ. ದಂಡೆ ಅವರು ಡಾ. ಜತ್ತಿ ಅವರ ರಾಜಕೀಯ ಮತ್ತು ಧಾರ್ಮಿಕ ಸೇವೆಯನ್ನೂ ಸ್ಮರಿಕೊಂಡರು.
ಬಸವಣ್ಣನವರು 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಹುಟ್ಟುಹಾಕಿದ ಶರಣ ಸಂಘಟನೆ ಇವತ್ತಿನ ಪ್ರಜಾಪ್ರಭುತ್ವದ ಮಾದರಿಯಲ್ಲಿ ಇದೆ. ನಮ್ಮ ಸಂವಿಧಾನ ಒದಗಿಸುವ ಇಂದಿನ ಸರ್ಕಾರದ ರಚನೆಯ ರೀತಿಯಲ್ಲಿಯೇ ಬಸವಣ್ಣನವರು ಶರಣಸಂಘಟನೆ ಮಾಡಿದ್ದು ಒಂದು ಅಪರೂಪದ ಸಂಗತಿಯಾಗಿದೆ. ಅವರೊಬ್ಬ ಸಮರ್ಥ ನಾಯಕರಾಗಿದ್ದು, ಸಮಸ್ಯಗಳನ್ನು ಎದುರಿಸುವ ಸಾಮಥ್ರ್ಯ ಹೊಂದಿದ್ದ ಅದ್ವಿತೀಯ ನಾಯಕರೂ ಆಗಿದ್ದರು ಎಂದು ಡಾ. ದಂಡೆ ಅವರು ಅಭಿಪ್ರಾಯ ಪಟ್ಟರು.
ಬಸವಣ್ಣನವರು ಮಹಾಮನೆಗೆ ಬರುವ ಮಾನವೀಯ ಹೃದಯವುಳ್ಳ ಸಜ್ಜನರನ್ನು ಮೂರು ಹಂತಗಳಲ್ಲಿ ಸಂಘಟಿಸಿದ್ದು ಕಂಡುಬರುತ್ತದೆ. ಒಂದನೆಯದು ಸಾಮಾನ್ಯ ಶರಣಗಣ/ಭಕ್ತಗಣ, ಎರಡನೆಯದು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಪ್ರಮಥಗಣ, ಮೂರನೆಯದು 770 ಅಮರ ಗಣ. ಶರಣಗಣ ಜನಸಾಮಾನ್ಯರನ್ನೊಳಗೊಂಡ ಸಮೂಹ, ಸಮಾಜ. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಪ್ರಮಥರು ಗ್ರಾಮಗಳಿಗೆ ತೆರಳಿ, ಸಾಮಾನ್ಯರಿಗೆ ಜ್ಞಾನವಂತರನ್ನಾಗಿಸುವ ಜವಾಬ್ದಾರಿ ಹೊತ್ತವರು. ಅಮರ ಗಣಂಗಳು ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಿ ತತ್ತ್ವಗಳನ್ನು ಚರ್ಚಿಸಿ, ನಿರ್ಣಹಿಸುವವರು. ಈ ಎಲ್ಲ ಶರಣರನ್ನು ಬಸವಣ್ಣನವರು ‘ತತ್ತ್ವ ಹಿಡಿದವರು’ ಎಂದು ಗುರುತಿಸುತ್ತಾರೆ.
ಬಸವಣ್ಣನವರು ತಮ್ಮ ಅನುಯಾಯಿಗಳಿಗೆ ಕೊಟ್ಟದ್ದು ದಾಸೋಹ ಮತ್ತು ಲಿಂಗತತ್ತ್ವಗಳನ್ನು. ಬಸವಣ್ಣನವರ ತತ್ತ್ವಗಳೆಲ್ಲ ಒಂದಕ್ಕೊಂದು ಆಂತರಿಕ ಸಂಬಂಧವನ್ನು ಹೊಂದಿದ್ದು, ಈ ಎರಡು ತತ್ತ್ವಗಳ ಮೇಲೆಯೇ ಇಡೀ ಲಿಂಗಾಯತ ತತ್ತ್ವಗಳು ಬೆಳೆದು ನಿಲ್ಲುತ್ತವೆ. ದಾಸೋಹ ಮತ್ತು ಲಿಂಗತತ್ತ್ವಗಳು ಸಮಾಜದಲ್ಲಿಯ ವರ್ಗ, ವರ್ಣ, ಲಿಂಗ ಮುಂತಾದ ಅಸಮಾನತೆಗಳನ್ನು ಹೋಗಲಾಡಿಸಲು ಬಸವಣ್ಣನವರು ಬಳಸಿದ ಅತ್ಯಂತ ಶಕ್ತಿಶಾಲಿ ಅಸ್ತ್ರಗಳು ಎಂದು ಡಾ. ವೀರಣ್ಣ ದಂಡೆ ಅವರು ವಿಶ್ಲೇಷಿಸಿದರು.
ಡಾ. ವಿಲಾವತಿ ಖೂಬಾ ಅವರು ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ದತ್ತಿ ದಾಸೋಹಿಗಳಾದ ಡಾ. ಕೆ.ಎಸ್. ವಾಲಿ, ಸಿದ್ದೇಶ್ವರ ಅನಂತಪುರ ಅವರು ವೇದಿಕೆಯಲ್ಲಿದ್ದರು. ಶ್ರಿ ಎಚ್.ಕೆ. ಉದ್ದಂಡಯ್ಯ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭೆಯಲ್ಲಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಕೇವಲ ಐದಾರು ಜನ ಮಾತ್ರ ಸಭಿಕರಾಗಿ ಭಾಗವಹಿಸಿದ್ದರು.