ಕಲಬುರಗಿ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿ ಸಚಿವ ಎಸ್.ಕೆ. ಕಾಂತ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಭೂ ಸುಧಾರಣೆ ಕಾಯ್ದೆಯಿಂದ ಉಳಿಗಮಾನ್ಯ ಪದ್ಧತಿಯ ಮರು ಸ್ಥಾಪನೆಗೆ ಹುನ್ನಾರ ಎಂದು ಅವರು ಟೀಕಿಸಿದ್ದಾರೆ.
ಈಗ ಇದ್ದ ಕಾಯ್ದೆಗಳನ್ನು ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಿ ಜನರಿಗೆ ಅನುಕೂಲ ಮಾಡುವುದನ್ನು ಬಿಟ್ಟು ಉಳ್ಳವರಿಗೆ ನೆರವಾಗಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದಾರೆ.
ರಾಜ್ಯ ಸರ್ಕಾರದ 1961ರ ಭೂ ಕಾಯ್ದೆಗೆ ತಿದ್ದಪಡಿ ಮಾಡಲು ಹೊರಟಿರುವುದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ಅವರು ‘ಇ- ಮೀಡಿಯಾ ಲೈನ್’ ಗೆ ತಿಳಿಸಿದ್ದಾರೆ.
ಈ ಹಿಂದೆ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಊಳುವವನೆ ಭೂ ಒಡೆಯ ಎಂದು ಕಾಯ್ದೆ ತಿದ್ದುಪಡಿ ಮಾಡಿದ್ದರೆ ಈಗಿನ ಬಿಜೆಪಿ ಸರ್ಕಾರ ರೈತರ ಜಮೀನು ಕಸಿದುಕೊಂಡು ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್ ನವರಿಗೆ ಹಾಗೂ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಲು ಹೊರಟಿದೆ ಎಂದು ಅವರು ಆಪಾದಿಸಿದ್ದಾರೆ.