ಸೊಲ್ಲಾಪುರ :ಕೊರೊನಾದಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಾಹಿತ್ಯ, ಸಾಂಸ್ಕೃತಿಕ, ರಂಗಭೂಮಿ ಹಾಗೂ ಸಂಗೀತ ಸೇರಿದಂತೆ ಅನೇಕ ಕಲಾವಿದರ ಬದುಕನ್ನು ಕಸಿದುಕೊಂಡಿದೆ. ಹೀಗಾಗಿ ಆದರ್ಶ ಕನ್ನಡ ಬಳಗವು ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಮಮತಾಜಿ ಅಣ್ಣಿಗೇರಿ ಮತ್ತು ಕಿರಿಯರ ವಿಭಾಗದಲ್ಲಿ ಲೀಸಾ ಕೊಕ್ಕರಣಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಗಡಿನಾಡಿನ ಕನ್ನಡ ಹೋರಾಟಗಾರ ಮತ್ತು ಸಮಾಜ ಸೇವಕರಾದ ಡಾ|| ಆರ್.ಕೆ.ಪಾಟೀಲರ ಪ್ರಾಯೋಜಕತ್ವದಲ್ಲಿ ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆಗಾಗಿ ಆರ್ಥಿಕ ಸಹಕಾರ ನೀಡಿದ್ದಾರೆ. ಹಿರಿಯರ ವಿಭಾಗದಲ್ಲಿ ಪ್ರಥಮ 5 ಸಾವಿರ ರೂ. ದ್ವೀತಿಯ 3 ಸಾವಿರ ರೂ. ತೃತೀಯ 2 ಸಾವಿರ ರೂ ಮತ್ತು ಕಿರಿಯರ ವಿಭಾಗದಲ್ಲಿ ಪ್ರಥಮ 5 ಸಾವಿರ ರೂ. ದ್ವೀತಿಯ 3 ಸಾವಿರ ರೂ. ತೃತೀಯ 2 ಸಾವಿರ ರೂ. ಸೇರಿದಂತೆ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನ ನೀಡಿ ಲಾಕ್‍ಡೌನ್ ಮುಗಿದ ಬಳಿಕ ಅವರನ್ನು ಗೌರವಿಸಲಾಗುವುದು ಎಂದು ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್ ಶೇಖ್ ಹೇಳಿದರು.
ಲಾಕಡೌನ್ ಸಮಯದಲ್ಲಿ ಗಾಯನ ಕಲೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆದರ್ಶ ಕನ್ನಡ ಬಳಗವು ರಾಷ್ಟ್ರ ಮಟ್ಟದ ಅಂತರ್ಜಾಲ ಗಾಯನ ಸ್ಪರ್ಧೆ ಆಯೋಜಿಸಿದ್ದರು. ಈ ಮುಂಚಿತವಾಗಿ ಆದರ್ಶ ಕನ್ನಡ ಬಳಗವು ಕಥಾಕಥನ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ಅಂತರ್ಜಾಲ್ ಮುಖಾಂತರ ಆಯೋಜನೆ ಮಾಡಿ ಆಸಕ್ತರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.
ರಾಷ್ಟ್ರ ಮಟ್ಟ ಕನ್ನಡ ಹಾಡುಗಳ ಅಂತರ್ಜಾಲ ಮುಖಾಂತರ ಈ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ ಸುಮಾರು 250 ಮತ್ತು ಕಿರಿಯರ ವಿಭಾಗದಲ್ಲಿ ಸುಮಾರು 150 ಗಾಯಕರು ಭಾಗವಹಿಸಿದ್ದರು. ಇವರೆಲ್ಲರೂ ಗಾಯನವನ್ನು ವಿಡಿಯೋ ಮಾಡಿ ವ್ಯಾಟ್ಸ್ ಆಫ್ ಮೂಲಕ ಆಯೋಜಕರಿಗೆ ಕಳುಹಿಸಿದ್ದಾರೆ. ಈ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ನಾಡಿನ ಮೂಲೆ ಮೂಲೆಯಿಂದ ಕನ್ನಡ ಗಾಯಕರು ತಮ್ಮ ಉತ್ತಮ ಗಾಯನದೊಂದಿಗೆ ಭಾಗವಹಿಸುವ ಮೂಲಕ ಸ್ಪರ್ಧೆಗೆ ಮೆರಗು ತಂದು ಕೊಟ್ಟಿದ್ದಾರೆ.