ನೀರು ಆವಿಯಾಗುತ್ತದೆ. ಆವಿ ಮೋಡ ಸೇರಿ ಮಳೆಯಾಗುತ್ತದೆ. ಮಳೆ ಮತ್ತೆ ಧರೆಗೆ ಇಳಿಯುತ್ತದೆ. ಏನಿದರ ವೃತ್ತಾಂತ.? ಎಷ್ಟು ಯೋಚಿಸಿದರೂ ಗೊಡ್ಡಾಚಾರ. ಕೊನೆಗೆ ಅದೊಂದು ಪ್ರಕ್ರಿಯೆ ಎಂದು ಸುಮ್ಮನಾಗಬೇಕು. ಆ ಮಳೆ ಹನಿಗಳು ಧರೆ ತಂಪಾಗಿಸಿದರೆ ಅದು ಲಾಭ. ನವಿರಾದ ಅನುಭವ ಅದರಿಂದ ಪಡೆಯಬಹುದು. ಆದರೆ ಅದೇ ಮಳೆ ಹನಿಗಳು ಸಮುದ್ರದ ಮೇಲೆ ಬಿದ್ದರೆ, ಅದರಿಂದ ಏನು ಉಪಯೋಗ..? ಹೀಗೊಂದು ಯೋಚನೆ ನನ್ನ ಹಿಡಿದಿಡಲು ಶುರುವಿಟ್ಟುಕೊಂಡು ದಿನ ಸುಮಾರಾದವು.
ಸಮುದ್ರಕ್ಕೆ ಈ ಮಳೆ ನೀರಿನ ಅಗತ್ಯವಿದೆಯೇ..? ಖಂಡಿತ ಇಲ್ಲ. ಸಮುದ್ರದ ಒಡಲೊಳಗೆ ಇಡೀ ಜಗತ್ತನ್ನು ತಿಂದು ತೇಗುವಷ್ಟು ನೀರಿದೆ. ಅಬ್ಬರಿಸಿದರೆ ಸಂಪೂರ್ಣ ನಾಶ. ಹಾಗೇ ನೋಡಿ ನಾನೂ ನೀವು. ವಾಸ್ತವದಲ್ಲಿ ನಮಗೆ ಬದುಕಲು ಅನ್ನ ಕೊಡುವುದು, ಉಸಿರಾಡಲು ಗಾಳಿ ಸಿಗುವುದು, ಕುಡಿಯಲು ನೀರು ಕೊಡುವುದು ಈ ಧರೆ. ಅವನ್ನು ಧಕ್ಕಿಸಿಕೊಳ್ಳುವ ಕಲೆ ನಮಗೆ ಗೊತ್ತಿರಬೇಕಷ್ಟೇ. ಇದರ ಮಧ್ಯೆ ನಮಗೆ ಧಕ್ಕದ ಭಾವನೆಗಳನ್ನು ಹುಡುಕುತ್ತಾ ಹೋಗಿ ನಾವು ಇವೆಲ್ಲವನ್ನೂ ಬೇಡ ಎನ್ನುತ್ತೇವೆ. ಹೀಗೆ ನೀವೂ ಮಾಡಿರಬಹುದು.
ತಂದೆ-ತಾಯಿ ನಮಗೆ ಇಷ್ಟ ಪಟ್ಟ ವಸ್ತುಗಳು ಕೊಡಿಸದೇ ಇದ್ದರೆ ಅನ್ನ ಬಿಡುವುದು. ಪ್ರಿಯತಮ-ಪ್ರೇಯಸಿ ಸಮಯ ಕೊಟ್ಟಿಲ್ಲವೆಂದು ಖಿನ್ನತೆಗೆ ಒಳಗಾಗುವುದು. ಗೆಳೆಯರು ಮಾತಾಡಿಸಲ್ಲವೆಂದು ಕೋಪ ಮಾಡಿಕೊಳ್ಳುವುದು. ಹೀಗೆ ಇದ್ಯಾವುದು ಸಿಕ್ಕಿಲ್ಲೆವೆಂದರೂ ನಾವು ನಮ್ಮನ್ನೇ ದಂಢಿಸಿಕೊಳ್ಳೋದಕ್ಕೆ ಶುರು ಮಾಡುತ್ತೇವೆ. ಊಟ-ನೀರು ಬಿಟ್ಟು ಅದನ್ನೇ ಚಿಂತಿಸಿ ಕೂರುತ್ತೇವೆ.
ನಿಮಗೊಂದು ಸಣ್ಣ ಕತೆಯೊಂದನ್ನ ಹೇಳುತ್ತೇನೆ ಕೇಳಿ. ವನದಲ್ಲಿದ್ದ ಗಾಳಿ ಒಮ್ಮೆ ಹೊಸ ಜಾಗ ಹುಡುಕಿಕೊಂಡು ಬೀಸುತ್ತಾ ಬೀಸುತ್ತಾ ಮರುಭೂಮಿಯತ್ತ ಹೊರಟಿತು. ಮರುಭೂಮಿ ತಲುಪಿದ ಕೂಡಲೇ ಗಾಳಿಗೆ ಧಗೆಯಾಗೋದಕ್ಕೆ ಶುರುವಾಯ್ತು. ಆದರೆ ಹೊಸದಾಗಿ ಹುಡುಕುವ ಗೋಜಿಗೆ ಬಿದ್ದು ತಾನು ಬಂದ ದಾರಿಯನ್ನು ಮರೆತು ಬಿಟ್ಟಿದೆ. ಈಗ ಮತ್ತೆ ಅರಣ್ಯ ಸೇರಲಾಗದೆ ಕಂಗಾಲಾಗಿ ಹೋಯ್ತು. ಗಾಳಿಯ ಮುಂದೆ ಬೇರೆ ವಿಧಿ ಇರಲಿಲ್ಲ. ಮುರುಭೂಮಿ ಸುತ್ತಲೇ ಬೀಸಲು ಶುರುವಿಟ್ಟುಕೊಂಡಿತು.
ಹೀಗೆ ನೋಡಿ ಬದುಕು ಕೂಡ. ನೀವು ಯಾರು ಅನ್ನೋದನ್ನ ಮೊದಲು ಕಂಡುಕೊಳ್ಳಿ. ನಿಮ್ಮ ದಾರಿ ಯಾವುದು ಎಂಬುದನ್ನು ಗುರುತಿಸಿ, ಗುರುತು ಮಾಡಿಕೊಳ್ಳಿ. ಬಳಿಕ ಹೊಸದಾಗಿ ಹುಡುಕಲು ಹೊರಡಿ. ಎಡವಿದರೂ ಮತ್ತೆ ಯಥಾಸ್ಥಿತಿಗೆ ವಾಪಾಸು ಬರಬಹುದು. ಇಲ್ಲದೆ ಹೋದರೆ ನೀವೂ ಕೂಡ ಸಮುದ್ರದ ಮೇಲೆ ಬೀಳುವ ಮಳೆ ಹನಿಗಳಂತೆಯೇ. ನಿಮ್ಮಿಂದ ನಿಮಗೂ, ಯಾರಿಗೂ ನಯಾ ಪೈಸೆಯಷ್ಟು ಉಪಯೋಗವಿಲ್ಲ. ಮಳೆ ಹನಿಗಳಾಗಿ ದಯವಿಟ್ಟು ಬರಡು ಭೂಮಿಗೆ ಬೀಳಿ. ದಯವಿಟ್ಟು ಸಮುದ್ರ ಆಯ್ದುಕೊಳ್ಳಬೇಡಿ.
Super