ವಾಡಿ: ಮುಂದೆ ಹೊರಟಿದ್ದ ಲಾರಿಯೊಂದನ್ನು ಹಿಂದಿಕ್ಕಲು ಪ್ರಯತ್ನಿಸಿ ಓವರ್‍ಟೇಕ್ ಮಾಡುವ ಆತುರದಲ್ಲಿ ಹಿಂದಿನಿಂದ ಡಿಕ್ಕಿ ಹೊಡೆದು ಮರಳು ಸಾಗಾಣಿಕೆ ಟಿಪ್ಪರ್ ಅಪಘಾತಕ್ಕೀಡಾದ ಘಟನೆ ಲಾಡ್ಲಾಪುರ ಸಮೀಪದ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.
ಯಾದಗಿರಿ ಜಿಲ್ಲೆಯ ಗೂಗಲ್ ಗ್ರಾಮದಿಂದ ರಾತ್ರಿ ಕಲಬುರಗಿ ನಗರಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಹೊಡೆದ ಡಿಕ್ಕಿಯಿಂದಾಗಿ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮರಳು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದೆ. ಮರಳು ಲಾರಿಯ ಕ್ಲೀನರ್ ಯಾದಗಿರಿಯ ಮುದ್ನಾಳ ತಾಂಡಾ ನಿವಾಸಿ ರಾಹುಲ ಚನ್ನು ರಾಠೋಡ (19)ಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಣ್ಣಪುಟ್ಟ ಗಾಯಗಳಾಗಿರುವ ಚಾಲಕ ವಿನೋದಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.