ಪೌರಕಾರ್ಮಿಕರ ನಿಯೋಜನೆ ಅವ್ಯವಹಾರದ ಆರೋಪ: ತನಿಖೆಗೆ ಸೂಚನೆ

0
58

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಕೆಲ ವಾರ್ಡ್‍ಗಳಿಗೆ ಅಗತ್ಯವಿರುವಷ್ಟು ಪೌರಕಾರ್ಮಿಕರ ನಿಯೋಜಿಸದೆ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಅವರು ಸೂಚಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು, ಈ ಬಗ್ಗೆ ಕುಲಂಕುಶ ವಿಚಾರಣೆ ಮಾಡಿ ಮುಂದಿನ ತಿಂಗಳು ವರದಿ ನೀಡಬೇಕೆಂದು ಹೇಳಿದ್ದಾರೆ.

Contact Your\'s Advertisement; 9902492681

ಇದಕ್ಕೂ ಮುನ್ನ, ಮಹಾನಗರ ಪಾಲಿಕೆಯ ಪರಿಸರ ಇಂಜಿನೀಯರ್ ಮುನಾಫ್ ಪಟೇಲ್ ಮಾತನಾಡಿ, ಕಲಬುರಗಿ ಮಹಾನಗರದಲ್ಲಿ 55 ವಾರ್ಡ್‍ಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಗೆ 351 ಮಂದಿ, ಕಸಗೂಡಿಸುವಿಕೆಗೆ 651, ಸಾಗಾಣಿಕೆ 166 ಮಂದಿ ಸೇರಿ ಒಟ್ಟು 1168 ಪೌರಕಾರ್ಮಿಕರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು, ನಾನು ವಾಸವಿರುವ 35ನೇ ವಾರ್ಡಿನಲ್ಲಿ ಕೇವಲ ಮೂರೇ ಮಂದಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರ ನಿಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದರು.

ಶಾಸಕ ಬಸವರಾಜ ಮುತ್ತಿಮೂಡ್ ಅವರು ಮಾತನಾಡಿ, ನಮ್ಮ ವಾರ್ಡ್‍ನಲ್ಲಿಯೂ ಇದೇ ಸ್ಥಿತಿ ಎಂದು ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಾರ್ಡ್‍ವಾರು ಪೌರಕಾರ್ಮಿಕರ ನೇಮಕ, ನಿಯೋಜನೆ ಮುಂತಾದ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ನಗರದ ಘನತ್ಯಾಜ್ಯ ನಿರ್ವಹಣೆಗೆ ಪ್ರತಿತಿಂಗಳು 2ವರೆ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. 10 ಪ್ಯಾಕೇಜ್‍ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಈ ಪೈಕಿ 10 ಸಾವಿರ ಜನರಿರುವ 35ನೇ ವಾರ್ಡ್‍ಗೆ 44 ಪೌರಕಾರ್ಮಿಕರ ಅಗತ್ಯತೆ ಇದೆ. ಹಾಲಿ 22 ಮಂದಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಸ್ವೀಪಿಂಗ್ ಮಾಡುವ ಮಹಿಳಾ ಕಾರ್ಮಿಕರು, ವಾಹನ ಚಾಲಕರು ಕೂಡ ಸೇರಿದ್ದಾರೆ ಎಂದು ಪರಿಸರ ಇಂಜಿನೀಯರ್ ಮುನಾಫ್ ಪಟೇಲ್ ಸಮರ್ಥಿಸಿಕೊಂಡರು.

ಇದರಿಂದ ತೃಪ್ತರಾಗದ ಸಚಿವರು, ತನಿಖೆಗೆ ಸೂಚಿಸಿ, ಸಂಜೆ 4 ಗಂಟೆಗೆ ಎಲ್ಲಾ ಪೌರಕಾರ್ಮಿಕರನ್ನು ಪ್ರದರ್ಶಿಸಬೇಕೆಂದು ಸೂಚಿಸಿದರು. ಹಾಗೆಯೇ ಇನ್ನು ಮುಂದೆ ಅಯಾ ವಾರ್ಡಿನ ಪೌರ ಕಾರ್ಮಿಕರು ಪ್ರತಿನಿತ್ಯ ಆಯಾ ಜನ ಪ್ರತಿನಿಧಿಗಳ ಮನೆ ಮುಂದೆ ಸಹಿ ಹಾಕಬೇಕೆಂದು ಕಟ್ಟುನಿಟ್ಟಾಗಿ ಹೇಳಿದರು.

2019-20ನೇ ಸಾಲಿನ ಒಟ್ಟು 3790.94 ಲಕ್ಷ ರೂಪಾಯಿ ಆಸ್ತಿ ತೆರಿಗೆ ವಸೂಲಾಗಬೇಕಾಗಿದೆ. 2184 ಲಕ್ಷರೂಪಾಯಿ ತೆರಿಗೆ ಸಂಗ್ರಹಿಲಾಗಿದ್ದು 1606 ಲಕ್ಷ ರೂಪಾಯಿ ತೆರಿಗೆ ಬಾಕಿ ಇದೆ. ಶೇಕಡ 57.62 ರಷ್ಟು ಸಂಗ್ರಹವಾಗಿದೆ. 2020-21ನೇ ಸಾಲಿನಲ್ಲಿ ಏಪ್ರಿಲ್-1ರಿಂದ ಮೇ 31ರವರೆಗೆ 4715.48 ಲಕ್ಷ ರೂಪಾಯಿ ಪೈಕಿ ಕೇವಲ 486.42 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಒಟ್ಟು 4229.06 ಲಕ್ಷ ರೂಪಾಯಿ ತೆರಿಗೆ ವಸೂಲಿ ಬಾಕಿ ಇದೆ ಎಂದು ಪಾಲಿಕೆಯ ಉಪ ಆಯುಕ್ತ ಆರ್.ಪಿ. ಜಾಧವ್ ಅವರು ಪಿಪಿಟಿ ಮೂಲಕ ವಿವರಿಸಿದರು.

ಈ ಕುರಿತು ಮಾತನಾಡಿದ ಸಚಿವರು, ನಾಗರಿಕರಿಗೆ ರಸ್ತೆ, ನೀರು ಮುಂತಾದ ಮೂಲಸೌಕರ್ಯ ಕಲ್ಪಿಸಲಾಗುತ್ತಿದ್ದು, ಹಾಗೆಯೇ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಬೇಕು. ಈ ಬಗ್ಗೆ ಕಂದಾಯ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಅವರು ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಲಬುರಗಿ ವಿಭಾಗದ ಇಂಜಿನಿಯರ್ ದಿಲೀಪ್ ಸಿಂಗ್ ಮಾತನಾಡಿ, ನೀರಿನ ಕರದ ಮಾಸಿಕ ಸರಾಸರಿ ಬೇಡಿಕೆ 99.60 ಲಕ್ಷ ರೂಪಾಯಿ ಇದ್ದು, ಮಾಸಿಕ ಸರಾಸರಿ 74 ಲಕ್ಷ ರೂಪಾಯಿ ವಸೂಲಿಯಾಗುತ್ತಿದೆ. ಆದರೆ, ವಿದ್ಯುತ್ ಶುಲ್ಕ ಹೊರತುಪಡಿಸಿ ಮಾಸಿಕ ನಿರ್ವಹಣಾ ವೆಚ್ಚಕ್ಕೆಂದೇ 110 ಲಕ್ಷ ರೂಪಾಯಿ ಬೇಕಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸುಮಾರು 30 ಲಕ್ಷ ರೂಪಾಯಿ ಕೈಯಿಂದಲೇ ಭರಿಸಬೇಕಾಗುತ್ತದೆ. ಇನ್ಮುಂದೆ ಅಗತ್ಯವಿರುವಷ್ಟು ಕರ ಸಂಗ್ರಹಿಸಿ, ವೆಚ್ಚಕ್ಕೆ ಸರಿದೂಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅವಶ್ಯವಿರುವ 325 ಲಕ್ಷ ರೂಪಾಯಿಯ ಭೀಮಾ ನದಿ ಬ್ಯಾರೇಜ್‍ನ ಎಂ.ಎಸ್. ಗೇಟುಗಳನ್ನು ಅಳವಡಿಸುವ ಕಾಮಗಾರಿಗೆ ಬೇಗ ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶರತ್. ಬಿ ಅವರು, ಆದ್ಯತೆಯ ಮೇಲೆ ಕಾಮಗಾರಿ ಕೈಗೊಂಡು, ನೀರಿನ ಸಮಸ್ಯೆ ನೀಗಲಾಗುವುದು ಎಂದು ಹೇಳಿದರು.

ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಗರದ ಎಲ್ಲ ಕಡೆ ಎಲ್.ಇ.ಡಿ. ಬಲ್ಬ್‍ಗಳನ್ನು ಒಂದು ವಾರದಲ್ಲಿ ಅಳವಡಿಸಬೇಕೆಂದು ಸೂಚಿಸಿದರು.

ಮುಂದಿನ 15 ದಿನಗಳಲ್ಲಿ ಶೇ. 100 ರಷ್ಟು ಕಾಮಗಾರಿಗಳನ್ನು ಮುಗಿಸಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚು ಶ್ರಮವಹಿಸÀಬೇಕು. ಪ್ರವಾಸದ ಮಾಹಿತಿ ನೀಡದೆ ದಿಢೀರ್ ಭೇಟಿ ಕೊಟ್ಟು, ಪರಿಶೀಸುವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಮುನ್ನ ಮತ್ತು ನಂತರ ಕೈಗೊಂಡ ಕ್ರಮಗಳನ್ನು ಪಿಪಿಟಿ ಮೂಲಕ ವಿವರಿಸಿದರು.

ಮಹಾನಗರದಲ್ಲಿ ಕೈಗೊಂಡಿರುವ ಲಾಕ್‍ಡೌನ್, ಸ್ಯಾನಿಟೈಸೇಷನ್, ಐಇಸಿ ಚಟುವಟಿಕೆ, ಮನೆಮನೆಗೆ ಅಗತ್ಯ ವಸ್ತುಗಳ ಪೂರೈಕೆ, ಅಂಗಡಿ-ಮಳಿಗೆಗಳಲ್ಲಿ ಸಾಮಾಜಿಕ ಆಂತರ ಕಾಯ್ದುಕೊಳ್ಳುವಿಕೆ, ಕಂಟೇನ್‍ಮೆಂಟ್ ಝೋನ್ ನಿರ್ಮಾಣ, ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮುಂತಾದವುಗಳ ನಿರ್ವಹಣೆ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ದತ್ತಾತ್ರೇಯ ಪಾಟೀಲ್ ರೇವೂರ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ, ಪಾಲಿಕೆ ಮುಖ್ಯ ಇಂಜಿನಿಯರ್ ಎಸ್.ಎನ್. ದಿನೇಶ್, ಕಾರ್ಯಪಾಲಕ ಇಂಜಿನಿಯರ್ ಬಸವರಾಜ್ ಮುಂತಾದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here