ವೃತ್ತಿಯಿಂದ ಇಂಜಿನಿಯರ್ ಆಗಿ ನಿವೃತ್ತಿಯಗಿರುವ ಶಿವಶಂಕರ ಹರಸೂರ ಅವರು ಹವ್ಯಾಸದಿಂದ ಶರಣ ಸಾಹಿತ್ಯಾಸಕ್ತರಾಗಿದ್ದಾರೆ. ಬಸವಾದಿ ಶಿವಶರಣರ ಬದುಕು ಹಾಗೂ ಬರಹದ ಬಗ್ಗೆ ನಿಜದ ನೆಲೆಯಲ್ಲಿ ನೋಡಬೇಕೆಂದು ಹೇಳುವ ಇವರು, ಈ ದಿಸೆಯಲ್ಲಿ ಈಗಾಗಲೇ ಸಾಕಷ್ಟು ಸಾಹಿತ್ಯ ಕೃಷಿಗೈದಿದ್ದಾರೆ. ಬಸವೇಶ್ವರ (ಬ್ರೀಫ್ ಲೈಫ್ ಸ್ಕೆಚ್ ಇನ್ ಕಪ್ಲೆಟ್ಸ್ ವಿಥ್ ವೊಕಾಬಲರಿ) ಎನ್ನುವ ಆಂಗ್ಲ ಭಾಷೆಯ ಪುಸ್ತಕವನ್ನು ರಚಿಸುವ ಮೂಲಕ ಬಸವಣ್ಣ ಮತ್ತು ವಚನ ಸಾಹಿತ್ಯದ ಹೊಸ ಸಾಧ್ಯತೆಗಳ ಕುರಿತು ಪರಿಚಯ ಮಾಡಿಕೊಟ್ಟಿದ್ದಾರೆ.
ಈವರೆಗೆ ಬಸವಣ್ಣನವರ ಬಗ್ಗೆ ವಿವಿಧ ಭಾಷೆಗಳಲ್ಲಿ ಸಾಕಷ್ಟು ಪುಸ್ತಕಗಳ ಪ್ರಕಟವಾಗಿವೆ ನಿಜ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಅದರಲ್ಲೂ ಕಾವ್ಯ ರೂಪದಲ್ಲಿ ಅವರ ಬಗ್ಗೆ ಪುಸ್ತಕಗಳು ಪ್ರಕಟವಾಗಿಲ್ಲ ಎಂದು ಹೇಳಬಹುದು. ಮೇಲಾಗಿ ದ್ವಿಪದಿಯಲ್ಲಿ ಬರೆದದ್ದು ಮತ್ತು ಪ್ರಾಸಬದ್ಧವಾಗಿ ಬರೆದದ್ದು ಇದೇ ಮೊದಲು ಎಂದು ಹೇಳಬಹುದು. ಯುಎನ್‌ಐ ೧೦-೧೨-೧೯೪೮ರಲ್ಲಿ ಮಾತನಾಡಿದರೆ ಈ ಬಗ್ಗೆ ಬಸವಣ್ಣನವರು ೧೨ನೇ ಶತಮಾನದಲ್ಲೇ ಮಾತನಾಡಿದ್ದರು ಎಂದು ಹೇಳುತ್ತ ಅವರು ಬೋಧಿಸಿದ ಮಾನವ ಹಕ್ಕುಗಳ ವಿವರಣೆ ನೀಡುವುದು ಈ ಕೃತಿಯ ವಿಶೇಷವಾಗಿದೆ.
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಬಸವಣ್ಣನವರ ಬಗ್ಗೆ ಉದ್ಗಾರ ತೆಗೆದು ಮಾತನಾಡಿರುವುದನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಸ್ತ್ರೀ ಸ್ವಾತಂತ್ರ್ಯ ಕೊಟ್ಟಾತ, ಏಕದೇವೋಪಾಸಕ, ಪ್ರಗತಿಪರ ಚಿಂತಕ, ಲಿಂಗಾಯತ ಧರ್ಮ ಸಂಸ್ಥಾಪಕ ಎಂದು ಮುಂತಾಗಿ ಬಸವಣ್ಣನವರ ವ್ಯಕ್ತಿತ್ವವನ್ನು ೨೩ ಬಗೆಯಲ್ಲಿ ಅತ್ಯಂತ ಸರಳವಾಗಿ ಅರ್ಥೈಸಲು ಪ್ರಯತ್ನಿಸಿದ್ದಾರೆ.
ಈ ಕೃತಿಗೆ ಪ್ರೊ. ಆರ್.ಕೆ. ಹುಡಗಿ ಮುನ್ನುಡಿ ಬರೆದಿದ್ದು, ಪಿ.ಎಸ್. ಮಹಾಗಾಂವಕರ್ ಬೆನ್ನುಡಿ ಬರೆದಿದ್ದಾರೆ. ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮತ್ತು ಡಾ. ಶೀಲಾ ಸಿದ್ಧರಾಮ ಅವರ ಅನಿಸಿಕೆಗಳನ್ನು ಬರೆಯುವುದರ ಜೊತೆಗೆ ಲೇಖಕರ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಬಸವಣ್ಣ ಹಾಗೂ ಆತನ ಧಾರ್ಮಿಕ, ಸಮಾಜಿಕ ಚಳವಳಿಯನ್ನು ಈವರೆಗೆ ತುಳಿಯುತ್ತಲೇ ಬರುವ ಮೂಲಕ ಸತ್ಯವನ್ನು ಮರೆ ಮಾಚಲು ಯತ್ನಿಸುವ ಹುನ್ನಾರ ನಡೆದಿದೆ. ಆದರೆ ಯಾರು ಎಷ್ಟೇ ತುಳಿದರೂ ಮೇಲಕ್ಕೆದ್ದು ಬರುವಾತ ಬಸವಣ್ಣ ಎಂಬುದನ್ನು ಈ ಕೃತಿಯ ಮೂಲಕ ಸಾಬೀತುಪಡಿಸಿದ್ದಾರೆ.
ಕೃಪೆ: ಶರಣ ಮಾರ್ಗ