ವಚನಕಾರರ ವೈಚಾರಿಕ ದರ್ಶನ ಮಾಡಿಸುವ ಕೃತಿ

0
175

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಕರೀಗೌಡ ಬೀಚನಹಳ್ಳಿ ರಚಿಸಿದ ಬಸವಣ್ಣ: ಪುನರ್ಲೇಖ ಕೃತಿ ಒಂದು ವಿಶಿಷ್ಟ ಅಧ್ಯಯನ ಕೃತಿ.

Contact Your\'s Advertisement; 9902492681

೧೨ನೇ ಶತಮಾನದಲ್ಲುಂಟಾದ ವಚನ ಚಳವಳಿ ಮೇಲ್ನೋಟಕ್ಕೆ ಅದೊಂದು ಅಭೂತಪೂರ್ವ ಸಾಮಾಜೋದ್ಧಾರ್ಮಿಕ ಚಳವಳಿ ಎನಿಸಿದರೂ ಶುದ್ಧ ಸಾಹಿತ್ಯಕ ಚಳವಳಿಯಾಗಿ ಕಂಡು ಬರುತ್ತದೆ. ಈ ಚಳವಳಿ ಸಂಭವಿಸಿ ೮೫೦ ವರ್ಷಗಳಾಗಿದ್ದರೂ ಆ ಸಾಹಿತ್ಯ ಈವರೆಗೆ ಸಮಾಜದಲ್ಲಿ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅದೇ ವೇಳೆಯಲ್ಲಿ ತನ್ನ ಜನಪರ ಮತ್ತು ಜೀವಪರ ತಾಕತ್ತಿನಿಂದ ಇಂದಿಗೂ ಪ್ರಸ್ತುತವೆನಿಸುತ್ತಿದೆ.

ವಚನ ಚಳವಳಿಯ ದಂಡ ನಾಯಕನಾಗಿದ್ದ ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಚಳವಳಿ ಕನ್ನಡ ಸಾಹಿತ್ಯಕ್ಕೆ ಸತ್ವ, ಶಕ್ತಿಯನ್ನು ತಂದುಕೊಟ್ಟಿದೆ ಎಂದರೆ ಬಹುಶಃ ತಪ್ಪಾಗಲಾರದು. ಆ ಕಾಲದಲ್ಲಿ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಇಂದಿಗೂ ತತ್ತರಿಸುತ್ತಿದ್ದೇವೆ.

ಅಂತಹ ಅದಟು ತುಂಬಿದ ಈ ಸಾಹಿತ್ಯದ ಬಗ್ಗೆ ಅಂದಿನಿಂದ ಇಂದಿನವರೆಗೆ ಅವಿಚ್ಛಿನ್ನವಾಗಿ ಪುರಾಣ, ಕಾವ್ಯ, ನಾಟಕ, ಕಥೆ, ಕಾದಂಬರಿ ಮತ್ತು ಸಂಶೋಧನೆ, ವಿಮರ್ಶಾ ಕೃತಿಗಳು ಹೊರ ಬಂದಿವೆ. ಟೀಕೆ, ವಾಖ್ಯಾನ, ಅರ್ಥ ವಿವರಣೆಯಂತಹ ಕಾರ್ಯ ನಡೆದಿವೆ.

ಆಧುನಿಕ ನಾಟಕ ಪರಂಪರೆಯಲ್ಲಿ ವಚನ ಸಾಹಿತ್ಯ ಚಳವಳಿ ಕುರಿತು ಅನೇಕ ನಾಟಕಗಳು ರಚನೆಯಾಗಿವೆ. ಅವುಗಳಲ್ಲಿ ಪಿ. ಲಂಕೇಶರ ಸಂಕ್ರಾಂತಿ, ಎಚ್.ಎಸ್. ಶಿವಪ್ರಕಾಶರ ಮಾಹಾಚೈತ್ರ, ಗಿರೀಶ ಕಾರ್ನಾಡರ ತಲೆದಂಡ, ಎಂ.ಎಂ. ಕಲಬುರ್ಗಿಯವರ ಕೆಟ್ಟೀತು ಕಲ್ಯಾಣ ಮತ್ತು ಚಂದ್ರಶೇಖರ ಕಂಬಾರ ಅವರ ಶಿವರಾತ್ರಿ ನಾಟಕಗಳು ಮುಖ್ಯವಾಗಿವೆ. ಈ ನಾಟಕಗಳು ಹೊರ ರೂಪದಲ್ಲಿ ಚರಿತ್ರೆಯ ಭಾಗಗಳಂತೆ ಕಂಡು ಬಂದರೂ ಒಳರೂಪದಲ್ಲಿ ವರ್ತಮಾನವನ್ನು ಅರ್ಥೈಸುವಂತೆ ಭಾಸವಾಗುತ್ತವೆ.

ಈ ಐದು ನಾಟಕಗಳನ್ನು ತುಂಬಾ ಶಿಸ್ತುಬದ್ಧವಾಗಿ ಹಾಗೂ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿರುವ ಕರೀಗೌಡ ಬೀಚನಹಳ್ಳಿಯವರು ವಚನ ಸಾಹಿತ್ಯದ ತಾತ್ವಿಕ ನೆಲೆಯನ್ನು ತಮ್ಮದೇ ಆದ ದಾಟಿಯಲ್ಲಿ ವಿಶ್ಲೇಷಿಸಿ ಅದನ್ನು ಶೋಧಿಸುವ ಪ್ರಯತ್ನ ಇಲ್ಲಿ ಮಾಡಿದ್ದಾರೆ. ಆರಂಭದ ೧೫ ಪುಟಗಳಲ್ಲಿ ಕಲ್ಯಾಣದ ಕಥನವನ್ನು ಯಾರ‍್ಯಾರು? ಯಾವ್ಯಾವ ರೀತಿಯಲ್ಲಿ ಗ್ರಹಿಸಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಸ್ವಾತಂತ್ರ್ಯಾ ನಂತರದ ಆಧುನಿಕ ಕಾಲದಲ್ಲಿ ರಚನೆಯಾದ ಈ ಐದು ನಾಟಕಗಳಲ್ಲಿ ೧೨ನೇ ಶತಮಾನದ ಯುಗಧರ್ಮ ಪುನರ್ಲೇಖದ ಸ್ವರೂಪ ಪಡೆದಿದೆ. ಬಸವಣ್ಣನವರ ಕುರಿತಾದ ಈ ನಾಟಕಗಳು ಆ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿಯನ್ನು ವಿವರಿಸುವುದರ ಜತೆಗೆ ವೈಚಾರಿಕ ದರ್ಶನ ಮಾಡಿಸುತ್ತವೆ ಎಂಬುದನ್ನು ಸಂಶೋಧನಾತ್ಮಕ ನೆಲೆಯಲ್ಲಿ ಗುರುತಿಸಿದ್ದಾರೆ.

  • (ಕೃಪೆ: ಶರಣ ಮಾರ್ಗ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here