ಕಲಬುರಗಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಶ್ರೀಮತಿ ನಾಗಭೂಷಣ ನಿಧನರಾಗಿದ್ದಾರೆ. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರ ಅದರಲ್ಲೂ ಕಲಬುರಗಿಯ ಸಾಹಿತ್ಯ ವಲಯ ಒಬ್ಬ ಉತ್ಕೃಷ್ಟ ಬರಹಗಾರ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಶಾಸಕರಾದ ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಕಂಬನಿ ಮಿಡಿದಿದ್ದಾರೆ.
ಕಲಬುರಗಿಯ ಗಟ್ಟಿ ಭಾಷೆಯನ್ನೇ ತಮ್ಮ ಕಥೆ ಕಾದಂಬರಿ ಹಾಗೂ ಬರಹಗಳಲ್ಲಿ ಬಳಸುವ ಮೂಲಕ ಕಲಬುರಗಿ ಕನ್ನಡಕ್ಕೆ ಖದರ್ ತಂದುಕೊಟ್ಟಿದ್ದ, ಶ್ರೀಮತಿ ಗೀತಾ ನಾಗಭೂಷಣ ಅವರು ತಮ್ಮ ‘ ಬದುಕು ‘ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿಕೊಳ್ಳುವ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಮಹಿಳಾ ಸಾಹಿತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
2010 ರಲ್ಲಿ ಗದಗ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಅವರ ಸಾಹಿತ್ಯ ಕೃಷಿಗೆ ರಾಜ್ಯ ಸರಕಾರ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿತ್ತು. ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಎನ್ನುವ ಗೌರಕ್ಕೂ ಅವರು ಪಾತ್ರರಾಗಿದ್ದರು. ಕಥೆ ಕಾದಂಬರಿ ಸಾಹಿತ್ಯಕ ಚಟುವಟಿಕೆಗಳಿಂದ ಸದಾ ಲವಲವಿಕೆ ಹೊಂದಿರುತ್ತಿದ್ದ ಗೀತಾ ನಾಗಭೂಷಣ ಅವರು ಅಪಾರ ಸಂಖ್ಯೆಯ ತಮ್ಮ ಸಾಹಿತ್ಯಿಕ ಶಿಷ್ಯ ವೃಂದವನ್ನು ಹೊಂದಿದ್ದರು.
ಅವರ ನಿಧನದಿಂದಾಗಿ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಸಾಹಿತ್ಯಾಸಕ್ತರಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.