ಶಹಾಬಾದ: ತಾಲೂಕಿನಲ್ಲಿ ಜುಲೈ ೧ರಿಂದ ಎಲ್ಲಾ ಅಂಗಡಿಗಳು ಸಂಜೆ ೫ರಿಂದ ಬೆಳಿಗ್ಗೆ ೫ರವರೆಗೆ ಬಂದ್ ಮಾಡಬೇಕು.ಮಾಸ್ಕ್ ಧರಿಸದ ಸಾರ್ವಜನಿಕರಿಗೆ ೧೦೦ರೂ. ದಂಡ ವಿಧಿಸಲಾಗುತ್ತದೆ.ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ನಗರದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಸಾರ್ವಜನಿಕರು ಸರಿಯಾಗಿ ಸಹಕಾರ ನೀಡುತ್ತಿಲ್ಲ. ಈಗಾಗಲೇ ಮಾಸ್ಕ್‌ಗಳನ್ನು ಧರಿಸಬೇಕು.ಸ್ಯಾನಿಟೈಜರ್ ಬಳಸಬೇಕು. ಅಂತರ ಕಾಯ್ದುಕೊಳ್ಳಬೇಕೆಂದು ನಿಯಮಗಳನ್ನು ಹಾಕಲಾಗಿತ್ತು.ಆದರೆ ಜನರು ಇದನ್ನು ಪಾಲಿಸುತ್ತಿಲ್ಲ. ಆದ್ದರಿಂದ ಜುಲೈ ೧ರಿಂದ ತಾಲೂಕಿನ ನಗರ ಸೇರಿದಂತೆ ಎಲ್ಲಾ ಗ್ರಾಮದ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಒಂದು ವೇಳೆ ಮಾಸ್ಕ್ ಧರಿಸದೇ ರಸ್ತೆ ಮೇಲೆ ಬಂದರೆ ೧೦೦ ರೂ. ದಂಡ ವಿಧಿಸಲಾಗುತ್ತದೆ.ಅಲ್ಲದೇ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಸಂಜೆ ೫ರಿಂದ ಬೆಳಿಗ್ಗೆ ೫ರವರೆಗೆ ಕಡ್ಡಾಯವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಒಪ್ಪಿದ್ದರಿಂದ ಜುಲೈ ೧ರಿಂದಲೇ ತರಕಾರಿ, ಹಾಲು, ಔಷಧ ಅಂಗಡಿ ಹೊರತುಪಡಿಸಿ, ತಾಲೂಕಿನ ಎಲ್ಲಾ ಅಂಗಡಿಗಳು ಕಡ್ಡಾಯವಾಗಿ ಬಂದ್ ಮಾಡಲೇಬೇಕು.ಅಲ್ಲದೇ ನಗರದ ಪ್ರತಿ ವೃತ್ತಗಳಲ್ಲಿ ಪೊಲೀಸ್, ಕಂದಾಯ ಹಾಗೂ ನಗರಸಭೆಯ ಸಿಬ್ಬಂದಿಗಳನ್ನು ನೇಮಕ ಮಾಡಿ ಮಾಸ್ಕ್ ಧರಿಸದಿರುವ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ ಹಾಗೂ ಅಂಗಡಿಗಳನ್ನು ತೆರೆಯುವವರ ವಿರುದ್ಧ ದಂಡ ವಿಧಿಸಲಿದ್ದಾರೆ.
ಪ್ರತಿ ರವಿವಾರ ಸಂಪೂರ್ಣ ಬಂದ್ ಇರಲಿದೆ. ಕಂದಾಯ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಹೊರತುಪಡಿಸಿ, ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಎಲ್ಲಾ ಕಚೇರಿಗಳು, ಸಂಸ್ಥೆಗಳು ಬಂದ್ ಇರಲಿವೆ.ಒಂದು ವೇಳೆ ಸರ್ಕಾರದ ನಿಯಮಗಳನ್ನು ಪಾಲಿಸದಿದ್ದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದು.ಆದ್ದರಿಂದ ಕೊವಿಡ್-೧೯ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿವ ಸಾರ್ವಜನಿಕರು ಸಹಕಾರ ನೀಡಬೇಕೆಂದು ತಹಸೀಲ್ದಾರ ಮನವಿ ಮಾಡಿದ್ದಾರೆ.