ವಾಡಿ: ಜನರ ಪ್ರತಿರೋಧವನ್ನು ಲೆಕ್ಕಿಸದೆ ಸರಕಾರ ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣ ಜಾರಿಗೆ ಆದೇಶ ನೀಡಿದ್ದು, ಅಪ್ರಜಾತಾಂತ್ರಿಕ ನಿಲುವಾಗಿದೆ. ಇದು ಸರಕಾರವೇ ರಚಿಸಿರುವ ತಜ್ಞರ ಸಮಿತಿಯ ಸ್ವಾಯತ್ತತೆಯ ಮೇಲಿನ ಆಕ್ರಮಣವಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇನ್ (ಎಐಡಿಎಸ್‌ಒ) ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದ್ದಾರೆ. ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುವುದರ ಕುರಿತು ತಜ್ಞರ ಸಮಿತಿಯೊಮದು ರಚಿಸಿರುವ ಸರಕಾರ, ವರದಿ ಬರುವ ಮುಂಚೆಯೇ ತರಾತುರಿಯಲ್ಲಿ ಆನ್‌ಲೈನ್ ಬೋಧನೆಗೆ ಅನುಮತಿ ನೀಡಿರುವುದು ಆ ಸಮಿತಿಯ ಶಿಕ್ಷಣ ತಜ್ಞರಿಗೆ ಮಾಡಿದ ಅವಮಾನವಾಗಿದೆ. ಈ ಅಂತರ್ಜಾಲ ಬೋಧನೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೋಷಕರೂ ಕೂಡ ಆನ್‌ಲೈನ್ ಬೋಧನೆಗೆ ವಿರೋಧ ವ್ಯಕ್ತಪಡಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುವ ಶುಲ್ಕದ ಬಗ್ಗೆಯೂ ಆತಂಕ ಹೊರಹಾಕಿದ್ದರು.
ಹಳ್ಳಿಗಳಲ್ಲಿ ಮೋಬಾಯಿಲ್, ಇಂಟ್‌ರ್ನೆಟ್ ಮತ್ತು ವಿದ್ಯುತ್ ಸೌಕರ್ಯಗಳ ಅನಾನುಕೂಲತೆಗಳ ಬಗ್ಗೆಯೂ ಸರಕಾರದ ಗಮನ ಸೆಳೆಯಲಾಗಿತ್ತು. ಇದರಿಂದಾಗು ಎಲ್ಲಾ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬೇಡವಾದ ಬೋಧನೆ ಪದ್ಧತಿ ಜಾರಿಗೆ ತರುತ್ತಿರುವುದು ಯಾರ ಹಿತಾಸಕ್ತಿ ಕಾಪಾಡಲು ಎಂದು ಪ್ರಶ್ನಿಸಿದ್ದಾರೆ.
ಆನ್‌ಲೈನ್ ಬೋಧನೆ ಕೈಬಿಡದಿದ್ದರೆ ರಾಜ್ಯದಾದ್ಯಂತ ಪೋಷಕರಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ ಜಂಟಿಯಾಗಿ ಎಚ್ಚರಿಕೆ ನೀಡಿದ್ದಾರೆ.