ವಾಡಿ: ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ.ಕೆ.ಶಿವುಕುಮಾರ ಅವರ ಆನ್‌ಲೈನ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಂಗಳಗಿ ಗ್ರಾಮದ ಕಾಂಗ್ರೆಸ್ ಮುಖಂಡರು, ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರು, ಸಂವಿಧಾನ ಪೀಠಿಕೆ ಪಠಣ ಮಾಡುವ ಮೂಲಕ ಪಕ್ಷ ಸಂಘಟನೆಯ ಶಪತ ಮಾಡಿದರು.
ತಾಪಂ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಅಣ್ಣಾರಾಯಗೌಡ ಪಾಟೀಲ ಅವರ ಮನೆಯಂಗಳದಲ್ಲಿ ಟಿವಿ ಮೂಲಕ ಡಿಕೆಶಿ ಅವರ ಅಧಿಕಾರ ಸ್ವೀಕಾರ ಸಮಾರಂಭದ ನೇರ ದೃಶ್ಯಾವಳಿಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡ ಕೈ ಕಾರ್ಯಕರ್ತರು, ಉತ್ಸಾಹಿ ನಾಯಕನಿಂದ ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಗೊಂಡು ಪುನಃ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಗಡಿಯಲ್ಲಿ ಚೀನಾ ಶತ್ರು ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಷ್ಟ್ರಗೀತೆ ಮತ್ತು ಪ್ರತಿಜ್ಞಾವಿಧಿ ಬೋಧನೆ ನಂತರ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಯಿತು.
ಕಾಂಗ್ರೆಸ್ ಹಿರಿಯ ಮುಖಂಡರಾದ ರುದ್ರುಗೌಡ ಪಾಟೀಲ, ಬಸವರಾಜ ಸ್ಥಾವರಮಠ, ಮರಬಸಯ್ಯಸ್ವಾಮಿ, ಸುಭಾಷ ಯಾಮೇರ, ಮಲ್ಲಿಕಾರ್ಜುನ ಯಾದಗಿರಿ, ಮುಕ್ರುಂ ಪಟೇಲ, ಗೌಸ್ ದುದ್ದನಿ, ಡಾ.ಎಂ.ಎಂ.ಘಫಾರ್, ವಾಹೀದ್ ಪಟೇಲ, ಶೇರಲಿ ದುದ್ದನಿ, ಬಸವರಾಜ ನಾಟೀಕಾರ, ಅಶೋಕ ಹಳಿಮನಿ, ನಾಗಪ್ಪ ರಾವೂರ, ವೆಂಕಟಗಿರಿ ಕಟ್ಟಿಮನಿ, ನಾಗಪ್ಪ ಸಂಕನ, ಚಂದ್ರು ಬಳವಡಗಿ, ಬಾಷುಮಿಯ್ಯಾ ಸೌಧಾಗರ, ಗುಡು ಅವಂಟಿ, ನಿಶಾಂತ ಪಾಟೀಲ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ವಾಡಿ ಸಾಹೇಬ ಫಂಕ್ಷನ್ ಹಾಲ್‌ನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿಕೆಶಿ ಪದಗ್ರಹಣ ವೀಕ್ಷಣಾ ಸಮಾರಂಭ ಏರ್ಪಡಿಸಲಾಗಿತ್ತು. ಹಳಕರ್ಟಿ, ಕಮರವಾಡಿ, ರಾವೂರ, ಲಾಡ್ಲಾಪುರ, ಸನ್ನತಿ, ಕೊಲ್ಲೂರ, ಕಡಬೂರ, ಶಾಂಪುರಹಳ್ಳಿ, ಯಾಗಾಪುರ ಗ್ರಾಪಂ ವಲಯಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂವೀಧಾನ ಪೀಠಿಕೆ ಓದಿದರು.