ಸುರಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ನಿತ್ಯವು ಕರೆತಂದು ಮರಳಿ ಗ್ರಾಮಗಳಿಗೆ ತಲುಪಿಸಿದ ಸಾರಿಗೆ ಇಲಾಖೆಯ ಚಾಲಕ ಮತ್ತು ನಿರ್ವಾಹಕರಿಗೆ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅನೇಕ ಪೋಷಕರು ಮಾತನಾಡಿ,ಇಂದು ಕೊರೊನಾ ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ,ಸ್ವಚ್ಛತಾ ಕರ್ಮಿಗಳು,ಪೊಲೀಸ್ ಇಲಾಖೆ,ಅಂಗನವಾಡಿ,ಆಶಾ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳಂತೆ ಸಾರಿಗೆ ಇಲಾಖೆಯ ಸಿಬ್ಬಂದಿಗಳುಕೂಡ ಕೊರೊನಾ ವಾರಿಯರ್ಸ್‌ಗಳಾಗಿದ್ದಾರೆ ಎಂದರು.ತಾಲೂಕಿನ ಕಟ್ಟ ಕಡೆಯ ಗ್ರಾಮದ ವಿದ್ಯಾರ್ಥಿಗಳನ್ನೂ ಬೆಳಿಗ್ಗೆಯೆ ಗ್ರಾಮಕ್ಕೆ ಬಸ್ ತಲುಪಿಸಿ ಕರೆತಂದು ಮತ್ತೆ ಪರೀಕ್ಷೆ ಮುಗಿದ ಬಳಿಕ ಬಿಟ್ಟು ಬರುವ ಮೂಲಕ ಮಕ್ಕಳ ಭವಿಷ್ಯಕ್ಕೆ ಆಸರೆಯಾಗಿದ್ದಾರೆ.
ಇಂತಹ ಮಹಾನ್ ಕಾರ್ಯವನ್ನು ಒಂದು ವಾರದಿಂದ ನಿರಂತರವಾಗಿ ಮಾಡಿಕೊಂಡು ಬಂದಿರುವ ಸಾರಿಗೆ ಇಲಾಖೆಗೆ ನಾವು ಧನ್ಯವಾದ ಅರ್ಪಿಸಲೆಬೇಕಿದೆ.ಬಸ್‌ನ ಚಾಲಕ ಮತ್ತು ನಿರ್ವಾಹಕರು ವಿದ್ಯಾರ್ಥಿಗಳಿಗಾಗಿ ತಮ್ಮ ನೆಮ್ಮದಿಯನ್ನು ಬದಿಗೊತ್ತಿ ಸೇವೆ ಸಲ್ಲಿಸಿದ್ದಾರೆ.ಅಂತಹ ಎಲ್ಲಾ ನೌಕರರಿಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾಲಿಬೆಂಚಿ ಗ್ರಾಮಕ್ಕೆ ಆಗಮಿಸಿದ್ದ ಬಸ್‌ನ ಚಾಲಕ ಮತ್ತು ನಿರ್ವಾಹಕರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಅಮರಪ್ಪ ನಾಯಕ ಜಹಾಗಿರದಾರ್,ಬಸವರಾಜ ಕುಂಬಾರ,ತಿಪ್ಪಣ್ಣ ಮರಾಠ,ನಬಿಸಾಬ ತಿಂಥಣಿ,ರವಿ ಕಾಮತ್,ಅಂಬರೇಶ ಸಾಹುಕಾರ,ಬಸವರಾಜ ಮರಾಠ,ಬಸವರಾಜ ಎ ಸೆಕ್ರೆಟರಿ ಸೇರಿದಂತೆ ಅನೇಕ ಜನ ವಿದ್ಯಾರ್ಥಿಗಳಿದ್ದರು.