ಶಹಾಬಾದ: ನಗರದಲ್ಲಿ ಕಳೆದ ಎರಡು ದಿನಗಳಿಂದ ಎಡಿಬಿ ಯೋಜನೆ ಅಡಿಯಲ್ಲಿ ದಿನದ ೨೪ ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಅಶುದ್ಧ ನೀರು ಸರಬರಾಜು ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನನ್ವಯ ಪೌರಾಯುಕ್ತ ಕೆ.ಗುರುಲಿಂಗಪ್ಪ ನಗರದ ಹೊರ ವಲಯದಲ್ಲಿರುವ ಮರಗೋಳ ಮಹಾವಿದ್ಯಾಲಯದ ಬಳಿ ಇರುವ ಎಡಿಬಿ ಯೋಜನೆಯ ನೀರು ಶುದ್ಧಿಕರಣ ಘಟಕಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
ಎರಡು ದಿನಗಳಿಂದ ರಾಡಿ ನೀರು ಬರುತ್ತಿರುವ ಬಗ್ಗೆ ಸಾರ್ವಜನಿಕರಿಗೆ ದೂರು ಬರುತ್ತಿವೆ. ಶುದ್ಧ ನೀರು ಪೂರೈಸುವುದು ನಿಮ್ಮ ಕರ್ತವ್ಯ.ಆದರೆ ತಾವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಮಳೆಯಾಗಿದ್ದರಿಂದ ನದಿಗೆ ರಾಡಿ ನೀರು ಬಂದಿದೆ ಎಂದು ಸಬೂಬು ಹೇಳಬೇಡಿ. ನದಿಯಿಂದ ರಾಡಿ ನೀರು ಬಂದಿದ್ದರೆ, ಮುಂಚೆಯೇ ಜನರಿಗೆ ನೋಟಿಸು ನೀಡಿ. ಒಂದು ದಿನ ನೀರು ಸರಬರಾಜು ತಡೆ ಹಿಡಿದು, ಮಳೆ ಮೇಲೆ ನಿಂತ ಮಣ್ಣಿನ ಶೇಖರಣೆ ಸ್ವಚ್ಚಗೊಳಿಸಿ ನೀರು ಸರಬರಾಜು ಮಾಡಬೇಕಾಗಿತ್ತು. ಇಂತಹ ನೀರು ಕುಡಿದು ಏನಾದರು ಅನಾಹುತವಾದರೆಯಾರು ಜವಾಬ್ದಾರರು ಎಂದು ಕೆಂಡಾಮಂಡಲರಾದರು.
ಅಲ್ಲದೇ ನೀರು ಶುದ್ಧಿಕರಣ ಮಾಡುವ ಅವಸರದಲ್ಲಿ ರಾಸಾಯನಿಕ ಪದಾರ್ಥಗಳನ್ನು ಹಾಕಬೇಡಿ. ಇದರಿಂದ ಬೇಧಿಯಾಗುವ ಸಾಧ್ಯತೆ ಇರುತ್ತದೆ. ಒಂದು ದಿನ ತಡವಾದರೂ ಪರವಾಗಿಲ್ಲ. ನದಿಯಲ್ಲಿ ಕಲುಷಿತ ನೀರು ಬಂದಲ್ಲಿ ಒಂದು ದಿನ ಮುಂಚಿತವಾಗಿ ಜನರಿಗೆ ಪತ್ರಿಕೆ, ಮೈಕ ಮೂಲಕ ಮಾಹಿತಿ ನೀಡಿ. ಇಂತಹ ಸಂದರ್ಭದಲ್ಲಿ ನೀರನ್ನು ಬಳಸುವ ವಿಧಾನ ಹೇಳಿಕೊಡಿ ಎಂದು ಹೇಳಿದರು. ನಂತರ ನೀರು ಶುದ್ಧಿಕರಣ ಪ್ರಮಾಣ ಪರಿಶೀಲಿಸುವ ಪ್ರಯೋಗಾಲಯ, ನೀರಿನ ಶುದ್ಧತೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಎಡಿಬಿ ಯೋಜನೆ ಇಇ ಪಾಟೀಲ, ಎಇಇ ರೇವಣಸಿದ್ದಪ್ಪ ಕುಂಬಾರ, ನೈರ್ಮಲ್ಯ ನಿರೀಕ್ಷಕ ಶಿವುಕುಮಾರ, ರಾಜೇಶ, ಶರಣು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.