ವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂಬೈ ನಿವಾಸ ರಾಜಗೃಹದ ಮೇಲೆ ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಈ ಕುರಿತು ಶುಕ್ರವಾರ ಪೊಲೀಸ್ ಠಾಣೆಗೆ ಆಗಮಿಸಿದ ಭಾಜಪ ನಗರ ಶಕ್ತಿಕೇಂದ್ರ ಮುಖಂಡರು ಹಾಗೂ ಕಾರ್ಯಕರ್ತರು, ಪಿಎಸ್‌ಐ ವಿಜಯಕುಮಾರ ಭಾವಗಿ ಅವರ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಘಟನೆ ಖಂಡಿಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಹಾಗೂ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಅವರು ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಮತ್ತು ಇದರ ಹಿಂದಿರುವ ಕಾಣದ ಕೈಗಳನ್ನೂ ಬಂಧಿಸಿ ಜೈಲಿಗಟ್ಟುವಂತೆ ಒತ್ತಾಯಿಸಿದರು.
ವಿಶ್ವಕ್ಕೆ ಮಾದರಿಯಾದ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ನಿವಾಸ ಧ್ವಂಸಕ್ಕೆ ಕೆಲ ಕಿಡಿಗೇಡಿಗಳು ಮುಂದಾದ ಘಟನೆ ಸ್ವಾಭೀಮಾನಿ ದೇಶವಾಸಿಗಳು ತಲೆತಗ್ಗಿಸುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರರ ನಿವಾಸವನ್ನು ಅಭಿವೃದ್ಧಿಪಡಿಸಿ ವಿಶ್ವಮಟ್ಟದಲ್ಲಿ ಗುರುತಿಸುವ ಪಣತೊಟ್ಟಿದ್ದು, ಅಂಬೇಡ್ಕರರ ಕನಸಿಗೆ ಪೂರಕವಾಗಿ ದೇಶದ ಆಡಳಿತವನ್ನು ನಡೆಸುತ್ತಿದ್ದಾರೆ. ಬಾಬಾಸಾಹೇಬರ ಕನಸು ಮತ್ತು ಶ್ರಮವನ್ನು ಹೆಚ್ಚು ಪ್ರಚಾರಕ್ಕೆ ತಂದವರು ಪ್ರಧಾನಿ ನರೇಂದ್ರ ಮೋದಿಯವರು. ಇಂಥಹ ಸಂದರ್ಭದಲ್ಲಿ ದುಷ್ಕೃತ್ಯ ಮೆರೆದಿರುವ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು. ಇದರ ಹಿಂದಿರುವ ಕಾಣದ ಶಕ್ತಿಗಳನ್ನು ಪತ್ತೆಹಚ್ಚಿ ಮುಲಾಜಿಲ್ಲದೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಸಿ ಮೋರ್ಚಾ ನಗರ ಘಟಕದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಹಿಂದುಳಿದ ವರ್ಗದ ಅಧ್ಯಕ್ಷ ಬಾಬು ಕುಡಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ಧೇಶ್ವರ ಚೋಪಡೆ, ಪುರಸಭೆ ಸದಸ್ಯ ಭೀಮರಾಯ ನಾಯ್ಕೋಡಿ, ಮಾಜಿ ಸದಸ್ಯ ಅಶೋಕ ಬಾಜಿರಾವ ಪವಾರ, ಮುಖಂಡರಾದ ರಿಚ್ಚರ್ಡ್ ಮರೆಡ್ಡಿ, ವಿಠ್ಠಲ ನಾಯಕ, ರಾಜು ಕೋಳಿ, ವಿನೋದಕುಮಾರ, ಅಂಬ್ರೀಶ ಮಾಳಗಿ, ಅಜಯ ಸುಳೆ, ಅಯ್ಯಣ್ಣ ದಂಡೋತಿ, ಕೈಲಾಸ ಲಾಟೆ, ಅನೀಲ ಚವ್ಹಾಣ ಪಾಲ್ಗೊಂಡಿದ್ದರು.